ಹಾವೇರಿ, ಗದಗ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಹಾವೇರಿ ಹಾಗೂ ಗದಗ ತಾಲ್ಲೂಕಿನಲ್ಲಿ ಶಿಕ್ಷಣ ಇಲಾಖೆ ಹಾಗೂ ತಾಲ್ಲೂಕು ಪಂಚಾಯತ್ ವಿನೂತನ ಪ್ರಯತ್ನಕ್ಕೆ ಕೈಹಾಕಿವೆ. ಹಾವೇರಿ ತಾಲೂಕಿನ 33 ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ವಿದ್ಯಾರ್ಥಿಗಳ ಓದಿಗೆ ಅಡ್ಡಿಯಾಗುವ ಮೊಬೈಲ್ ಹಾಗೂ ಟಿವಿಗಳನ್ನು ರಾತ್ರಿ 7ರಿಂದ 9ರವರೆಗೆ ಬಂದ್ ಮಾಡುವಂತೆ ಗ್ರಾಮ ಪಂಚಾಯತ್ ಸಿಬ್ಬಂದಿ ಡಂಗೂರ ಸಾರುತ್ತಿದ್ದಾರೆ.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ಇಲಾಖೆ ಹಾಗೂ ತಾಪಂ ಈ ವಿಶೇಷ ಕ್ರಮ ಜಾರಿಗೆ ತಂದಿವೆ. ಮಕ್ಕಳಿಗೆ ಓದುವ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಪಾಲಕರು ಸಹಕರಿಸಬೇಕು ಎಂದು ಮನವಿ ಮಾಡುವಂತೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ ಹುಬ್ಬಳ್ಳಿ ಅವರು ಎಲ್ಲಾ ಪಿಡಿಓಗಳಿಗೆ ಸೂಚನೆ ನೀಡಿದ್ದಾರೆ.
ಹಾವೇರಿ ತಾಲ್ಲೂಕಿನ ಪ್ರತಿ ಹಳ್ಳಿಯಲ್ಲೂ ಗ್ರಾಪಂ ಸಿಬ್ಬಂದಿ ಡಂಗೂರ ಸಾರುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದು, ಈ ಕ್ರಮಕ್ಕೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ. 2024–25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಾವೇರಿ ತಾಲ್ಲೂಕು ರಾಜ್ಯಕ್ಕೆ 13ನೇ ಸ್ಥಾನ ಪಡೆದಿದ್ದ ಹಿನ್ನೆಲೆ, ಈ ಬಾರಿ ಇನ್ನೂ ಉತ್ತಮ ಸಾಧನೆ ಮಾಡುವ ಗುರಿ ಹೊಂದಲಾಗಿದೆ.
ಶಿಕ್ಷಣ ಇಲಾಖೆ ಹಾಗೂ ತಾಪಂನ ಈ ವಿನೂತನ ಪ್ರಯತ್ನಕ್ಕೆ ತಾಲ್ಲೂಕಿನಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪಾಲಕರು ಹಾಗೂ ಶಿಕ್ಷಕರು ಸಹ ಈ ಕ್ರಮವನ್ನು ಸ್ವಾಗತಿಸಿದ್ದಾರೆ.



