ಭೋಪಾಲ್:- ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾಗೆ ನರಕ ಗ್ಯಾರಂಟಿ ಎಂದು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಮಧ್ಯ ಪ್ರದೇಶದ ಮಹೂವಿನಲ್ಲಿ ನಡೆದ ಜೈ ಬಾಪೂ, ಜೈ ಭೀಮ್, ಜೈ ಸಂವಿಧಾನ್ ಮಹಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಹಾಗೂ ಅಮಿತ್ ಮಾಡಿರುವ ಪಾಪ ಒಂದೆರಡಲ್ಲ. ಅವರು ಮಾಡಿದ ಪಾಪಗಳಿಂದಾಗಿ ನೂರು ಜನ್ಮವೆತ್ತಿದರೂ ಸ್ವರ್ಗಕ್ಕೆ ಹೋಗಲ್ಲ. ಜನರ ಶಾಪದಿಂದ ಅವರಿಗೆ ನರಕವೇ ಸಿಗಲಿದೆ ಎಂದು ಶಾಪ ಹಾಕಿದ್ದಾರೆ.
ಅಮಿತ್ ಶಾ ರಾಜ್ಯಸಭೆಯಲ್ಲಿ ಹೇಳ್ತಾರೆ.. ʻಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎನ್ನುವುದು ಕೆಲವರಿಗೆ ಈಗ ಫ್ಯಾಷನ್ ಆಗಿಬಿಟ್ಟಿದೆ. ಅಂಬೇಡ್ಕರ್ ಬದಲು ದೇವರ ನಾಮಸ್ಮರಣೆ ಮಾಡಿದರೆ 7 ಜನ್ಮ ಸ್ವರ್ಗ ಪ್ರಾಪ್ತಿಯಾಗುತ್ತಿತ್ತುʼ ಅಂತ ಹೇಳ್ತಾರೆ. ಇದು ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ಅವರಿಗೆ ಇರುವ ಗೌರವ. ಈ ಮೋದಿ ಮತ್ತು ಶಾ ನಮ್ಮನ್ನ ಬದುಕಲು ಬಿಡಲ್ಲ. ನಾವು ಬದುಕಬೇಕು ಅಂದ್ರೆ ಹೋರಾಡಬೇಕು, ಹೋರಾಡುವುದನ್ನ ಕಲಿಯಬೇಕು. ಆಗ ಅಮಿತ್ ನಾ ಅಂತಹವರು ಓಡಿ ಹೋಗ್ತಾರೆ ಎಂದು ಕರೆ ಕೊಟ್ಟಿದ್ದಾರೆ.
ಮುಂದುವರಿದು… ಮೋದಿ ಸಂವಿಧಾನ ಪುಸ್ತಕವನ್ನು ಕಣ್ಣಿಗೆ ಒತ್ತಿಕೊಳ್ಳುತ್ತಾರೆ, ಸಂವಿಧಾನದ ಬಗ್ಗೆ ತುಂಬಾ ಮಾತನಾಡ್ತಾರೆ. ಆದ್ರೆ ಮಾಡುವುದೆಲ್ಲ ಸಂವಿಧಾನ ವಿರೋಧಿ ಕೆಲಸವನ್ನೇ. ಇಂತಹವರಿಂದ ನಾವೆಲ್ಲ ಇಂದು ಬಡವರನ್ನು ರಕ್ಷಿಸುವುದಕ್ಕಾಗಿ ಕೆಲಸ ಮಾಡಬೇಕಿದೆ ಎಂದು ಎಚ್ಚರಿಸಿದ್ದಾರೆ.