ಮಂಡ್ಯ:- ಅಂಬೇಡ್ಕರ್ ಆಶಯದಂತೆ ನರೇಂದ್ರ ಮೋದಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮಂಡ್ಯದಲ್ಲಿ ‘ಬೌದ್ಧ ಅಂಬೇಡ್ಕರ್ ಮಹಾದ್ವಾರ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅತ್ಯಂತ ಅರ್ಥಪೂರ್ಣವಾಗಿ ನಿರ್ಮಿಸಲಾಗಿರುವ ಈ ಮಹಾದ್ವಾರ ಸಮ ಸಮಾಜದ ಸಂಕೇತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನೂ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಐತಿಹಾಸಿಕವಾಗಿ ಅಂಬೇಡ್ಕರ್ ಅವರಿಗೆ ಬಹಳ ಅಪಚಾರವಾಗಿತ್ತು. ಅದನ್ನು ಸರಿಪಡಿಸಿ ಮನುಕುಲ ಇರುವವರೆಗೂ ಬಾಬಾ ಸಾಹೇಬ್ ಅವರನ್ನು ಸ್ಮರಿಸಿಕೊಳ್ಳುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ.
ದೇವೇಗೌಡರು ದಲಿತರ ಉದ್ಧಾರಕ್ಕಾಗಿ ಅನೇಕ ಉತ್ತಮ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು. ಗಂಗಾ ಕಲ್ಯಾಣ ಯೋಜನೆಯನ್ನು ಅವರು ಜಾರಿಗೆ ತಂದು ಅನೇಕರಿಗೆ ಸಹಾಯ ಮಾಡಿದ್ದರು. ಸಚಿವರಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ದಲಿತರ ಉದ್ಧಾರಕ್ಕೆ ಬಹುದೊಡ್ಡ ಕಾಣಿಕೆ ನೀಡಿದ್ದಾರೆ ಎಂದರು.
ಮೊದಲು ಮೀಸಲು ಸೌಲಭ್ಯ ಕೇವಲ ವಿಧಾನಸಭೆ, ಲೋಕಸಭೆ ಕ್ಷೇತ್ರಗಳಿಗೆ ಮೀಸಲಾಗಿತ್ತು. ದೇವೇಗೌಡರು ಆ ಮೀಸಲು ಸೌಲಭ್ಯವನ್ನು ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯಿತಿ ಸೇರಿ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿಯೂ ಜಾರಿಗೆ ತಂದರು. ಹಾಸನ ಜಿಲ್ಲಾ ಪಂಚಾಯತಿ ಅಧ್ಯಕ್ಷರನ್ನಾಗಿ ಎಂಎ ಪದವೀಧರನಾಗಿದ್ದ ಒಬ್ಬ ದಲಿತ ಯುವಕನನ್ನು ಮಾಡಿದ್ದರು. ತಳಮಟ್ಟದ ಸಮುದಾಯಗಳ ವಿದ್ಯಾವಂತರನ್ನು ಗುರುತಿಸಿ ಅಧಿಕಾರ ನೀಡುವ ಕೆಲಸವನ್ನು ಅವರು ಮಾಡಿದ್ದರು ಎಂದು ಹೇಳಿದರು.