ಬೆಂಗಳೂರು:- ಮತದಾರರ ಪಟ್ಟಿ ತಯಾರಿಯಲ್ಲಿ ಮೋದಿ ಪಾತ್ರ ಇಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮತದಾರರ ಪಟ್ಟಿ ತಯಾರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಥವಾ ಬಿಜೆಪಿ ನಾಯಕರ ಪಾತ್ರವೇ ಇಲ್ಲ. ಇದನ್ನು ಅಧಿಕಾರಿಗಳೇ ತಯಾರು ಮಾಡುತ್ತಾರೆ. ಹೀಗಾಗಿ ರಾಹುಲ್ ಗಾಂಧಿಯದ್ದು ಆಟಂ ಬಾಂಬ್ ಅಲ್ಲ. ಹೊಸೂರಿನಲ್ಲಿ ತಯಾರಾದ ಹಳೇ ಟುಸ್ ಪಟಾಕಿಯಾಗಿದೆ.
ರಾಜ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಪ್ರತಿ ಬೂತ್‌ಗೆ ಬಿಎಲ್‌ಎಗಳನ್ನು ಕಾಂಗ್ರೆಸ್ ನೀಡಿದೆ. ಮತದಾರರ ಪಟ್ಟಿಯ ಮೊದಲ ಪ್ರತಿಯನ್ನು ಬಿಎಲ್‌ಎಗೆ ನೀಡಲಾಗುತ್ತದೆ. ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರೇ ನೇಮಿಸಿದ್ದಾರೆ. ಮತದಾರರ ಪಟ್ಟಿಯಲ್ಲಿ ಸತ್ತವರ ಹೆಸರು ತೆಗೆದುಹಾಕುವುದು, ಹೊಸಬರನ್ನು ಸೇರಿಸುವುದು ಮೊದಲಾದ ಕೆಲಸವನ್ನು ಬಿಎಲ್‌ಎ ಮಾಡುತ್ತಾರೆ. ಇಂತಹ ಬಿಎಲ್‌ಎಗಳನ್ನು ನೇಮಿಸಿದ ಕಾಂಗ್ರೆಸ್ ಏನು ತಪ್ಪು ಮಾಡಿಲ್ಲವೇ? ಎಂದು ಪ್ರಶ್ನೆ ಮಾಡಿದರು.
ಡಿ.ಕೆ.ಶಿವಕುಮಾರ್ ಅವರ ಬಳಿಯೇ ಮತದಾರರ ಪಟ್ಟಿ ಇದ್ದಾಗ, ಆಗಲೇ ಅಕ್ರಮದ ಬಗ್ಗೆ ದೂರು ನೀಡಬೇಕಿತ್ತು. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರವೇ ಇಲ್ಲ. ಅಥವಾ ಬಿಜೆಪಿ ನಾಯಕರ ಪಾತ್ರವೇ ಇಲ್ಲ. ಪಂಚಾಯಿತಿ ಕಾರ್ಯದರ್ಶಿ, ಅಂಚೆಯವರು, ತೆರಿಗೆ ಸಂಗ್ರಹ ಮಾಡುವವರು, ಆರೋಗ್ಯ ಸಿಬ್ಬಂದಿ ಹೀಗೆ ಇವರೆಲ್ಲರೂ ಮತದಾರರ ಪಟ್ಟಿಗೆ ತಯಾರಿಯಲ್ಲಿ ಭಾಗವಹಿಸುತ್ತಾರೆ. ಇವರೆಲ್ಲರೂ ಬಿಜೆಪಿಯವರಾ? ಪಟ್ಟಿಗೆ ಅಕ್ರಮವಾಗಿ ಹೆಸರನ್ನು ಬಿಜೆಪಿಯವರು ಹೇಗೆ ಸೇರಿಸಲು ಸಾಧ್ಯ? ಎಂದು ಪ್ರಶ್ನಿಸಿದರು.