ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಕರ್ನಾಟಕದ ಜನತೆಗೆ ಮಕರ ಸಂಕ್ರಾಂತಿ ಶುಭಾಶಯ ಕೋರಿದ್ದು, ವಿಶೇಷವಾಗಿ ಕನ್ನಡದಲ್ಲೇ ಪತ್ರ ಬರೆದು ಶುಭಹಾರೈಸಿರುವುದು ಗಮನ ಸೆಳೆದಿದೆ. ಈ ಪತ್ರವನ್ನು ಮೋದಿ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮೋದಿ ತಮಿಳು, ತೆಲುಗು, ಹಿಂದಿ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪತ್ರ ಬರೆದು ಆಯಾ ರಾಜ್ಯದ ಜನತೆಗೆ ಸಂಕ್ರಾಂತಿ / ಪೊಂಗಲ್ ಶುಭಾಶಯ ಕೋರಿದ್ದಾರೆ. ಅದರಲ್ಲೂ ಕನ್ನಡದಲ್ಲಿ ನೇರವಾಗಿ ಸಂದೇಶ ನೀಡಿರುವುದು ಕರ್ನಾಟಕದಲ್ಲಿ ವಿಶೇಷ ಗಮನ ಸೆಳೆಯುತ್ತಿದೆ.
ಪತ್ರದಲ್ಲಿ ಮೋದಿ, “ಆತ್ಮೀಯ ಸಹ ನಾಗರಿಕರೇ, ಸಂಕ್ರಾಂತಿಯ ಈ ಶುಭ ಸಂದರ್ಭದಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳು. ಸೂರ್ಯನ ಪಥ ಬದಲಾವಣೆಯ ಹೊಸ ಆರಂಭವನ್ನು ಸೂಚಿಸುವ ಈ ಹಬ್ಬ ಭರವಸೆ ಮತ್ತು ಸಕಾರಾತ್ಮಕತೆಯ ಸಂಕೇತವಾಗಿದೆ” ಎಂದು ಬರೆದಿದ್ದಾರೆ.
ದೇಶಾದ್ಯಂತ ವಿಭಿನ್ನ ರೂಪಗಳಲ್ಲಿ ಆಚರಿಸಲ್ಪಡುವ ಸಂಕ್ರಾಂತಿ, ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತಿಬಿಂಬವಾಗಿದ್ದು, ಒಗ್ಗಟ್ಟಿನ ಭಾವನೆಯನ್ನು ಬಲಪಡಿಸುವ ಹಬ್ಬ ಎಂದು ಮೋದಿ ಉಲ್ಲೇಖಿಸಿದ್ದಾರೆ.
ಸಂಕ್ರಾಂತಿ ರೈತರ ಜೀವನದಲ್ಲಿ ವಿಶೇಷ ಸ್ಥಾನ ಹೊಂದಿದೆ ಎಂದು ಹೇಳಿದ ಮೋದಿ, “ಇದು ಅನ್ನದಾತರಿಗೆ ಕೃತಜ್ಞತೆ ಸಲ್ಲಿಸುವ ಸಂದರ್ಭ. ಸಂಕ್ರಾಂತಿ ನಮ್ಮನ್ನು ಆತ್ಮವಿಶ್ವಾಸ ಮತ್ತು ಆಶಾವಾದದೊಂದಿಗೆ ಮುಂದಕ್ಕೆ ಸಾಗಲು ಪ್ರೇರೇಪಿಸುತ್ತದೆ” ಎಂದು ಹೇಳಿದ್ದಾರೆ.
“ನಿಮ್ಮ ಜೀವನದಲ್ಲಿ ಸಮೃದ್ಧಿ, ಆರೋಗ್ಯ, ಸಂತೋಷ ನೆಲೆಸಲಿ. ನಿಮ್ಮ ಮನೆಗಳಲ್ಲಿ ಸಂತೋಷ, ಸಮಾಜದಲ್ಲಿ ಸಾಮರಸ್ಯ ಮೂಡಲಿ” ಎಂದು ಪ್ರಧಾನಿ ಹಾರೈಸಿದ್ದಾರೆ.
ಟ್ವಿಟ್ಟರ್ ಪೋಸ್ಟ್‌ನಲ್ಲೂ ಮೋದಿ, “ಎಳ್ಳು-ಬೆಲ್ಲದ ಮಾಧುರ್ಯದಂತೆ ಈ ಹಬ್ಬ ಜನರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಯಶಸ್ಸು ತರಲಿ. ಸೂರ್ಯ ದೇವರು ಎಲ್ಲರನ್ನೂ ಆಶೀರ್ವದಿಸಲಿ” ಎಂದು ಹೇಳಿದ್ದಾರೆ.



