ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ನರೇಂದ್ರ ಮೋದಿಯವರಿಗೆ ಎಂತಹ ಪರಿಸ್ಥಿತಿಯನ್ನೂ ನಿಭಾಯಿಸುವ ರಾಜಕೀಯ ಮುತ್ಸದ್ದಿತನ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿ ಲೋಕಸಭಾ ಚುನಾವಣೆ ಗೆಲುವಿನ ಬಳಿಕ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಲೋಕಸಭೆಗೆ ಬಹಳ ವಿಶೇಷವಾಗಿ ಇರುವ ಸಂಧರ್ಭದಲ್ಲಿ ಆಯ್ಕೆಯಾದೆ. ಪ್ರಧಾನಿಗಳು ಹಾಗೂ ಪಕ್ಷದ ಹಿರಿಯರ ಮಾತಿನಂತೆ ಸ್ಪರ್ಧೆ ಮಾಡಿದೆ. ಅವರ ಲೆಕ್ಕಾಚಾರ ಸರಿಯಾಗಿದೆ. ದೇಶದಲ್ಲಿ ನೋಡಿದಾಗ ಮೋದಿ ಮೂರನೇ ಬಾರಿ ಪ್ರಧಾನಿ ಆಗುತ್ತಿದ್ದಾರೆ. ಕೆಲವು ಕಡೆ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಸಾಧ್ಯವಾಗಿಲ್ಲ. ಎಂತಹ ಸಂದರ್ಭವನ್ನಾದರೂ ಮೋದಿ ನಿಭಾಯಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಮೋದಿಯವರು ಬಹಳ ವಿಭಿನ್ನವಾಗಿ ರಾಜಕಾರಣ ನಡೆಸಿಕೊಂಡು ಬಂದಿದ್ದಾರೆ. ಗುಜರಾತ್ ಗಲಭೆಯನ್ನು ಸಮರ್ಥವಾಗಿ ನಿಭಾಯಿಸಿದರು. ಬಹಳ ಪೈಪೋಟಿ ಇದ್ದರೂ ಸಂಪೂರ್ಣ ಮೆಜಾರಿಟಿ ತಂದರು. ಎರಡನೇ ಬಾರಿ ಬಹುಮತ ಹೆಚ್ಚಿಸಿ ಎನ್‌ಡಿಎ ವಿಸ್ತಾರ ಮಾಡಿದ್ದಾರೆ. ಇದೆಲ್ಲಾ ನೋಡಿದಾಗ ರಾಜಕೀಯವಾಗಿ ಮುತ್ಸದ್ದಿತನ ಪ್ರದರ್ಶಿಸಿದ್ದಾರೆ. ಇಂಡಿ ಘಟಬಂಧನ್ ನೋಡಿದರೆ ಅಲ್ಲಿ ಯಾವುದೇ ಬೆಳವಣಿಗೆ ಇಲ್ಲ.
ಕಾಂಗ್ರೆಸ್ ನಂಬಿಕೊಂಡು ಹೋಗುವ ಕೆಲಸ ನಿತೀಶ್ ಕುಮಾರ್ ಅಥವಾ ಚಂದ್ರ ಬಾಬು ನಾಯ್ಡು ಮಾಡುವುದಿಲ್ಲ ಎಂದರು.
ಈ ಬಾರಿ ಎನ್‌ಡಿಎ ಸಾಧನೆ ಹೇಗಿದೆ ಅಂದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೋಲಿಸಿದರೆ ಈ ಬಾರಿ ಉತ್ತಮವಾಗಿದೆ. ಇದರಲ್ಲಿ ಜಾತಿ ಪ್ರಶ್ನೆ ಬರುವುದಿಲ್ಲ. ಮೋದಿ ಅವರನ್ನು ಅತ್ಯಂತ ಟೀಕೆ ಮಾಡಿದ್ದರು.
ಕಾಂಗ್ರೆಸ್ ಮಿತ್ರ ಪಕ್ಷಗಳ ಹೆಗಲ ಮೇಲೆ ಕೂತು ಕೆಲಸ ಮಾಡಿದೆ. ಅವರ ಸ್ವಂತ ಬಲದಿಂದ ಅಲ್ಲ. ಮಿತ್ರ ಪಕ್ಷದ ಬಲದಿಂದ ಅಷ್ಟು ಸೀಟು ಗೆದ್ದಿದ್ದಾರೆ. ಜೆಡಿಎಸ್ ಜೊತೆಗಿನ ಮೈತ್ರಿ ದಕ್ಷಿಣ ಕರ್ನಾಟಕದಲ್ಲಿ ಉತ್ತಮವಾಗಿದೆ. ಉತ್ತಮ ಮತಗಳು ನಮಗೆ ಬಂದಿದೆ. ಜನ ಸರ್ಕಾರದ ವಿರುದ್ಧ ಬೇಸತ್ತು, ಮೈತ್ರಿ ಬೆಂಬಲಿಸಿದ್ದಾರೆ ಎಂದರು.
ಸಚಿವ ನಾಗೇಂದ್ರ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಕ್ರಮ ಸಾಬೀತಾಗಿದೆ, ಎಸ್‌ಐಟಿ ತನಿಖೆ ಮಾಡುತ್ತಿದೆ. ಸಿಬಿಐ ಪ್ರವೇಶವಾಗಿದೆ. ಎಸ್‌ಐಟಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಸಮಸ್ಯೆ ಇಲ್ಲ. ಇಲ್ಲದಿದ್ದರೆ ಸಿಬಿಐ ತನಿಖೆ ಶುರು ಮಾಡಲಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಮೋದಿ ಗ್ಯಾರಂಟಿ ಫೇಲ್ ಆಗಿದೆ ಎಂದು ಆರೋಪ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಗ್ಯಾರಂಟಿ ನಡುವೆ ನಾವು ಸಾಧನೆ ಮಾಡಿದ್ದೇವೆ. ಇವರು ಕರ್ನಾಟಕದಲ್ಲಿ 20 ಸ್ಥಾನ ಗೆಲ್ಲುವುದಾಗಿ ಹೇಳಿದ್ದರು. 9ಕ್ಕೆ ಬಂದು ನಿಂತಿದ್ದಾರೆ. ಡಿಕೆ ಬ್ರದರ್ಸ್ ಸೋತಿದ್ದಾರೆ. ಅವರಿಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.