ಮಠಗಳು ಶ್ರದ್ಧಾ-ಭಕ್ತಿಯ ಕೇಂದ್ರಗಳು

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ದೇವಸ್ಥಾನ, ಮಠ-ಮಂದಿರಗಳ ಕಲ್ಪನೆಯ ಭಾರತ ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ ಮತ್ತು ಈ ನಾಡಿನ ದೇವಸ್ಥಾನಗಳು, ಧಾರ್ಮಿಕ ಪರಂಪರೆಗಳು, ದೇವರು, ಋಷಿ-ಮುನಿಗಳು, ಘಣಾದೀಶ್ವರರ ಲೀಲೆ, ಪವಾಡ, ಧರ್ಮ, ಸಂಪ್ರದಾಯ, ಆಚರಣೆಗಳು ವಿಜ್ಞಾನಕ್ಕೆ ಸವಾಲಾಗಿವೆ ಎಂದು ಬಾಲೆಹೊಸೂರ ಶಿರಹಟ್ಟಿ ಫಕ್ಕೀರೇಶ್ವರ ಸಂಸ್ಥಾನಮಠದ ಶ್ರೀ ಜ. ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದರು.

Advertisement

ಅವರು ಗುರುವಾರ ತಾಲೂಕಿನ ಶಿಗ್ಲಿ ಗ್ರಾಮದ ಶ್ರೀ ಗುರು ಕೊಟ್ಟೂರೇಶ್ವರಸ್ವಾಮಿ ಮಠದ ಲೋಕಾರ್ಪಣೆ, ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಬಳಿಕ ನಡೆದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆರ್ಶಿರ್ವಚನ ನೀಡಿದರು.

ಮಠ-ಮಂದಿರಗಳು ಶ್ರದ್ಧಾ ಭಕ್ತಿಯ ಕೇಂದ್ರಗಳಾಗಿದ್ದು, ಜನರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಿ ದೇವರು, ಧರ್ಮ, ನಂಬಿಕೆ, ವಿಶ್ವಾಸ ಮೂಡಿಸಿ ಸನ್ಮಾರ್ಗ-ಸನ್ನಡತೆಯ ಬದುಕಿನತ್ತ ಕೊಂಡ್ಯೊಯ್ಯುತ್ತವೆ. ಗುರುವಿಲ್ಲದ ಮಠ, ದೇವರಿಲ್ಲದ ಗುಡಿ ಮತ್ತು ಹಿರಿಯರಿಲ್ಲ ಮನೆ ಶ್ರೇಷ್ಠವಲ್ಲ. ಮಠ ಮತ್ತು ಮಂದಿರಗಳಿಗೆ ವ್ಯತ್ಯಾಸವಿದೆ. ಮಠಗಳ ಉದ್ದೇಶ ಜ್ಞಾನ ಪ್ರಧಾನವಾಗಿದ್ದರೆ, ದೇವಸ್ಥಾನಗಳು ಕರ್ಮ ಪ್ರಧಾನವಾಗಿವೆ. ರಾಮಾಯಣದ ಕಾಲದಲ್ಲಿ ಋಷಿಗಳು ಪ್ರಧಾನವಾಗಿದ್ದರೆ, ಮಹಾಭಾರತ ಕಾಲದಲ್ಲಿ ಮುನಿಗಳು ಪ್ರಧಾನವಾಗಿದ್ದಾರೆ.

ನಂತರದಲ್ಲಿ ಗಣಾಧೀಶ್ವರ, ದಾಸರು, ಶರಣರು, ಸಂತರು, ಜಂಗಮರು, ಮಠಾದೀಶರು ಬರುತ್ತಾರೆ. ಗ್ರಾಮೀಣ ಜನರಿಗೆ ಧರ್ಮೋಪದೇಶ ಮಾಡಿ ಕನ್ನಡ ನಾಡಿನಲ್ಲಿ ಸಂಚರಿಸಿ ಚರಿಸುವ ಜಂಗಮ ಶ್ರೇಷ್ಠರು. ಶ್ರೀ ಕೊಟ್ಟೂರ ಬಸವೇಶ್ವರರು ಜನಹಿತ, ಲೋಕ ಕಲ್ಯಾಣಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡಿದ್ದಾರೆ. ಇಂತಹ ದೇವರ ಸ್ವರೂಪದ ಮಹಾತ್ಮರ ಸ್ಮರಣೆ, ಧಾರ್ಮಿಕ ಆಚರಣೆ, ಸಂಪ್ರದಾಯ, ಪರಂಪರೆಗಳು ನಿರಂತರವಾಗಿರಲಿ. ಮನುಷ್ಯ ಜನ್ಮದ ಸಾರ್ಥಕತೆಗಾಗಿ ದಾನ, ಧರ್ಮ, ಸಮಾಜೋಪಯೋಗಿ ಕಾರ್ಯಗಳಿಗೆ ಕೈಜೋಡಿಸಿ ಎಂದರು.

ಮಾಜಿ ಶಾಸಕರಾದ ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ತಹಸೀಲ್ದಾರ ವಿ.ಎಂ. ಮುಳಗುಂದ, ಎಸ್.ಪಿ. ಮುಳಗುಂದ, ಗುರು ಕೊಟ್ಟೂರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಮಹಾದೇವಪ್ಪ ಬೆಳವಗಿ, ದೇವಿಂದ್ರಪ್ಪ ಗುಲಗಂಜಿ, ಸುಭಾಸ ಹುಲಗೂರ, ಡಾ. ವಿನೋದ ಹೊನ್ನಿಕೊಪ್ಪ, ಡಾ. ಪಿ.ಪಿ. ಶಿರಹಟ್ಟಿ, ಫಕ್ಕೀರೇಶಪ್ಪ ಕಾಳಪ್ಪನವರ, ಕೇಶವ ಗುಲಗಂಜಿ, ಶಿವಾನಂದಯ್ಯ ಶಂಕಿನಮಠ, ರಾಮಣ್ಣ ಲಮಾಣಿ (ಶಿಗ್ಲಿ) ಸೇರಿದಂತೆ ಗ್ರಾ.ಪಂ ಅಧ್ಯಕ್ಷರು, ಸರ್ವ ಸದಸ್ಯರು, ಗುರು-ಹಿರಿಯರು ಇದ್ದರು.

ಬನ್ನಿಕೊಪ್ಪ/ಮೈಸೂರಿನ ಜಪದಕಟ್ಟಿಮಠದ ಡಾ. ಸುಜ್ಞಾನದೇವ ಶಿವಾಚಾರ್ಯರು ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಾಡಿ, ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು. ನೇತೃತ್ವ ವಹಿಸಿದ್ದ ಹೂವಿನಶಿಗ್ಲಿ ಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು, ಬೆಳ್ಳಟ್ಟಿಯ ಬಸವರಾಜ ಮಹಾಸ್ವಾಮಿಗಳು ಕಳಸಾರೋಹಣ ನೆರವೇರಿಸಿ ಆಶೀರ್ವಚನ ನೀಡಿದರು. ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ ಧರ್ಮಸಭೆ ಉದ್ಘಾಟಿಸಿ ಮಾತನಾಡಿದರು.


Spread the love

LEAVE A REPLY

Please enter your comment!
Please enter your name here