ಶಿವಮೊಗ್ಗ: ವಕ್ಫ್ ಆಸ್ತಿ ವಿವಾದದಿಂದ ಮಠ ಮಂದಿರಗಳಿಗೆ, ರೈತರಿಗೆ, ದಲಿತರಿಗೆ ಅನ್ಯಾಯ ಆಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ವಕ್ಫ್ ಆಸ್ತಿ ವಿಚಾರದಲ್ಲಿ ಮುಸ್ಲಿಮರ ಧೋರಣೆಯಿಂದ ಅವರ ಸಮಾಜ ಅಧೋಗತಿಗೆ ಹೋಗಲಿದೆ. ಕೇವಲ ನಮ್ಮ ರಾಜ್ಯ ಅಷ್ಟೇ ಅಲ್ಲದೇ ಇತರೆ ರಾಜ್ಯದಲ್ಲಿ ಇದೇ ಬೆಳವಣಿಗೆಯಾಗುತ್ತಿದೆ.
ಮುಸ್ಲಿಮರಿಗೆ ಕೇಡುಗಾಲ ಬಂದಿದೆ. ಅದಕ್ಕಾಗಿ ಇಡೀ ಹಿಂದೂ ಸಮಾಜಕ್ಕೆ ದ್ರೋಹ ಬಗೆಯುತ್ತಿದ್ದಾರೆ. ವಕ್ಫ್ ಆಸ್ತಿ ವಿವಾದದಿಂದ ಮಠ ಮಂದಿರಗಳಿಗೆ, ರೈತರಿಗೆ, ದಲಿತರಿಗೆ ಅನ್ಯಾಯ ಆಗಿದೆ ಎಂದು ಕಿಡಿಕಾರಿದ್ದಾರೆ. ಸಾಧು ಸಂತರು ಮೊದಲ ಬಾರಿಗೆ ಹಿಂದೂಗಳ ಆಸ್ತಿ ಉಳಿಸಬೇಕು ಎಂದು ಹೇಳಿಕೆ ಕೊಡುತ್ತಿದ್ದಾರೆ. ವಕ್ಫ್ ಆಸ್ತಿ ವಿವಾದದ ಬಗ್ಗೆ ಸಾಧು ಸಂತರು ಜಾಗೃತಿಯಾಗಿರೋದು ತುಂಬಾ ಸಂತೋಷದ ವಿಷಯ.
ಸಾಧು ಸಂತರ ಆಹ್ವಾನದ ಮೇರೆಗೆ ಆಸ್ತಿ ಪರಿಶೀಲನೆಗೆ ಹೋಗುತ್ತಿದ್ದೇನೆ. 1.10 ಲಕ್ಷ ಎಕರೆ ವಕ್ಪ್ ಆಸ್ತಿ ಆಗಿದೆ ಎಂದು ಜಮೀರ್ ವಿಧಾನಸೌಧದಲ್ಲಿ ಹೇಳಿದ್ದಾರೆ. ಇದರ ವಿರುದ್ಧ ಜನ ಯಾವುದೇ ಕೋರ್ಟ್‍ಗೆ ಹೋಗುವ ಹಾಗೆ ಇಲ್ಲ. ಮುಸ್ಲಿಮರು ಇಲ್ಲದ ಕಡೆ ಹಾಗೂ ಶಾಲಾ ಆಸ್ತಿಯನ್ನು ವಕ್ಫ್ ಆಸ್ತಿ ಎನ್ನುತ್ತಿದ್ದಾರೆ. ವಕ್ಫ್ ಆಸ್ತಿ ಎಂದು ಇರುವ ಪಹಣಿಯನ್ನು ತಕ್ಷಣ ರದ್ದು ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.