ಮಠಗಳು ಸಂಸ್ಕಾರ ಕೊಡುವ ಕೇಂದ್ರಗಳಾಗಬೇಕು

0
Spread the love

ವಿಜಯಸಾಕ್ಷಿ ಸುದ್ದಿ, ಶಹಾಪುರ: ಮೌಲ್ಯಾಧಾರಿತ ಚಿಂತನಗಳು ಬಾಳಿನ ಆಶಾಕಿರಣ. ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಆಧ್ಯಾತ್ಮದ ಜ್ಞಾನ ಅವಶ್ಯಕ. ಮಠಗಳು ಮತ್ತು ಧಾರ್ಮಿಕ ಕೇಂದ್ರಗಳು ಜಾತಿಯ ಗೂಡುಗಳಾಗದೇ ಸಂಸ್ಕಾರ ಕೊಡುವ ಆಧ್ಯಾತ್ಮ ಕೇಂದ್ರಗಳಾಗಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

Advertisement

ಅವರು ಬುಧವಾರ ತಾಲೂಕಿನ ದೋರನಹಳ್ಳಿ ಶ್ರೀಮದ್ ರಂಭಾಪುರಿ ಶಾಖಾ ಸಂಸ್ಥಾನ ಹಿರೇಮಠದ ಶ್ರೀ ಗುರು ಪಟ್ಟಾಧಿಕಾರ ಮಹೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಮಾನವನ ಉಸಿರಾಟಕ್ಕೆ ಗಾಳಿ ಎಷ್ಟು ಮುಖ್ಯವೋ ಹಾಗೆಯೇ ಉಜ್ವಲ ಭವಿಷ್ಯಕ್ಕೆ ಆಚಾರ್ಯರ ಮತ್ತು ಸತ್ಪುರುಷರ ಮಾರ್ಗದರ್ಶನ ಮುಖ್ಯ. ಸಂಸ್ಕಾರಯುಕ್ತ ಜೀವನ ಶ್ರೇಯಸ್ಸಿಗೆ ಕಾರಣವಾಗುತ್ತದೆ. ಕಾಯಿಸಿದ ಚಿನ್ನ ಒಡವೆಯಾಗುತ್ತದೆ. ಬಡಿದ ತಾಮ್ರ ತಂತಿಯಾಗುತ್ತದೆ. ಕೆತ್ತಿದ ಕಲ್ಲು ಸುಂದರ ಮೂರ್ತಿಯಾಗುತ್ತದೆ. ಅದರಂತೆ ಸಂಸ್ಕಾರದಿಂದ ಮನುಷ್ಯ ಆದರ್ಶ ವ್ಯಕ್ತಿಯಾಗಿ ಬಾಳಲು ಸಾಧ್ಯವಾಗುತ್ತದೆ. ಭೌತಿಕ ಜೀವನ ಸಮೃದ್ಧಗೊಂಡಂತೆ ಆಂತರಿಕ ಬದುಕನ್ನು ಪರಿಶುದ್ಧಗೊಳಿಸುವ ಶಕ್ತಿ ಗುರುವಿಗೆ ಇದೆ.

ವೀರಶೈವ ಧರ್ಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ದಶ ಧರ್ಮ ಸೂತ್ರಗಳ ಪರಿಪಾಲನೆಯಿಂದ ಬದುಕು ಬಲಗೊಳ್ಳುವುದರಲ್ಲಿ ಸಂದೇಹವಿಲ್ಲ. ದೋರನಹಳ್ಳಿ ಹಿರೇಮಠ ಶ್ರೀ ರಂಭಾಪುರಿ ಪೀಠದ ಶಾಖಾ ಮಠವಾಗಿದ್ದು, ಸಗರ ನಾಡಿನಲ್ಲಿ ಪ್ರಖ್ಯಾತಿಯನ್ನು ಪಡೆದಿದೆ. ಭಕ್ತರ ಬಾಳಿಗೆ ಆಧ್ಯಾತ್ಮ ದಾರಿ ತೋರಿ ಸನ್ಮಾರ್ಗಕ್ಕೆ ಕರೆತಂದ ಕೀರ್ತಿ ಶ್ರೀ ಮಠಕ್ಕೆ ಇದೆ. ಶ್ರೀ ವೀರ ಮಹಾಂತ ಶಿವಾಚಾರ್ಯರ ಅಗಲಿಕೆಯಿಂದ ತೆರವಾದ ಸ್ಥಾನಕ್ಕೆ ಅಭಿನವ ಮಹಾಂತೇಶ್ವರ ಶಿವಾಚಾರ್ಯ ಸ್ವಾಮಿಗಳವರಿಗೆ ಶ್ರೀ ಮಠದ ಪಟ್ಟಾಧಿಕಾರ ನೆರವೇರಿಸಿ ಆಶೀರ್ವದಿಸಲಾಗಿದೆ. ಕನ್ಯಾಕೋಳೂರು ಚನ್ನವೀರ ಶಿವಾಚಾರ್ಯರು ನೂತನ ಶ್ರೀಗಳಿಗೆ ಧಾರ್ಮಿಕ ಸಂಸ್ಕಾರ ಮತ್ತು ಷಟ್ಸ್ಥಲ ಬ್ರಹ್ಮೋಪದೇಶ ಮಾಡಿ ಶುಭ ಹಾರೈಸಿದ್ದಾರೆ ಎಂದರು.

ನೇತೃತ್ವ ವಹಿಸಿದ ದೋರನಹಳ್ಳಿ ಚಿಕ್ಕಮಠದ ಶಿವಲಿಂಗ ರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಬಹು ದಿನಗಳ ಸಂಕಲ್ಪ ಇಂದು ನೆರವೇರಿದೆ. ಗುರು-ಶಿಷ್ಯರ ಸಂಬಂಧ ತಾಯಿ-ಮಕ್ಕಳ ಸಂಬAಧ ಇದ್ದಂತೆ. ಮಠಗಳಿಂದ ಸಮಾಜದಲ್ಲಿ ಶಾಂತಿ-ಸಾಮರಸ್ಯ, ಭಾವೈಕ್ಯತೆ ಬೆಳೆದು ಬರುವ ನಿಟ್ಟಿನಲ್ಲಿ ಕೊಟ್ಟ ಕೊಡುಗೆ ಅಪಾರವಾದುದು. ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದದಿಂದ ದೋರನಹಳ್ಳಿ ಹಿರೇಮಠಕ್ಕೆ ಯೋಗ್ಯ ಶ್ರೀಗಳು ಪ್ರಾಪ್ತವಾಗಿರುವುದು ಭಕ್ತರ ಸೌಭಾಗ್ಯವೆಂದರು.

ಶ್ರೀನಿವಾಸ ಸರಡಗಿಯ ರೇವಣಸಿದ್ಧ ಶಿವಾಚಾರ್ಯರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಘಟಗಳಿಂದ ಮಠ ಬೆಳೆಯಬೇಕು. ಮಠಗಳಿಂದ ಘಟಗಳು ಬೆಳಗಬಾರದು. ಕ್ರಿಯಾಶೀಲ ವ್ಯಕ್ತಿತ್ವದಿಂದ ಧರ್ಮಕ್ಕೆ ಮತ್ತು ಮಠಕ್ಕೆ ಶ್ರೇಯಸ್ಸು ಉಂಟಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ನೂತನ ಶ್ರೀಗಳು ಈ ಭಾಗದಲ್ಲಿ ಆಧ್ಯಾತ್ಮ ಜ್ಯೋತಿ ಬೆಳಗಲೆಂದು ಆಶಿಸಿದರು.

ದೇವಾಪುರ ಶಿವಮೂರ್ತಿ ಶ್ರೀಗಳು, ಅಚಲೇರಿ ಸೂತ್ರೇಶ್ವರ ಶ್ರೀಗಳು, ದಂಡಗುಂಡ ಸಂಗನಬಸವ ಶ್ರೀಗಳು ಚರಬಸವೇಶ್ವರ ಸಂಸ್ಥಾನ ಗದ್ದುಗೆ ಬಸವಯ್ಯ ಶರಣರು ಉಪಸ್ಥಿತರಿದ್ದರು. ಮಾಜಿ ಶಾಸಕ ಗುರು ಪಾಟೀಲ, ಜಿಲ್ಲಾ ಬಿ.ಜೆ.ಪಿ ಮಾಜಿ ಅಧ್ಯಕ್ಷ ಶರಣು ಗೋಪಾಲರೆಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಪಟ್ಟಾಧಿಕಾರ ಧಾರ್ಮಿಕ ಕಾರ್ಯಕ್ರಮದ ನೇತೃತ್ವವನ್ನು ಶಹಾಪುರದ ಸಿದ್ಧೇಶ್ವರ ಶ್ರೀಗಳು, ಸಗರದ ಮರುಳ ಮಹಾಂತ ಶ್ರೀಗಳು, ಸೋಮಶೇಖರ ಶ್ರೀಗಳು, ಮುದ್ರಿಕಿಯ ಶೀಲವಂತ ಶ್ರೀಗಳು, ಹಲಕರ್ಟಿಯ ಮುನೀಂದ್ರ ಶ್ರೀಗಳು ವಹಿಸಿದ್ದರು. ಸನ್ನತಿಯ ಚಂದ್ರಶೇಖರ ಶಾಸ್ತಿçಗಳು, ಹುರಸಗುಂಡಗಿ ಶರಣಯ್ಯ ಶಾಸ್ತ್ರಿಗಳು, ಕುರಕುಂದಿಯ ಚನ್ನಯ್ಯ ಶಾಸ್ತ್ರಿಗಳು ಪ್ರಧಾನ ಪುರೋಹಿತರಾಗಿ ಭಾಗವಹಿಸಿದ್ದರು. ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು. ದೋರನಹಳ್ಳಿ ಈಶ್ವರಪ್ಪಗೌಡ ಲಕ್ಕಶೆಟ್ಟಿ ಸರ್ವರನ್ನು ಸ್ವಾಗತಿಸಿದರು. ಮಹೇಶ ಪತ್ತಾರ ನಿರೂಪಿಸಿದರು.

ನೂತನ ಪಟ್ಟಾಧ್ಯಕ್ಷರಾದ ಅಭಿನವ ಮಹಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮಾನವೀಯ ಸಂಬಂಗಳು ಶಿಥಿಲಗೊಳ್ಳುತ್ತಿರುವ ಸಂದರ್ಭದಲ್ಲಿ ನಾಡಿನ ಮಠಗಳು ಭಕ್ತ ಸಂಕುಲಕ್ಕೆ ಸಂಸ್ಕೃತಿ, ಸಭ್ಯತೆ ಉಳಿಸಿ-ಬೆಳೆಸುವ ಅವಶ್ಯಕತೆಯಿದೆ. ಶ್ರೀ ಮಠದ ಪೂರ್ವ ಶ್ರೀಗಳು ಹಾಕಿದ ದಾರಿಯಲ್ಲಿ ಹಾಗೂ ಶ್ರೀ ರಂಭಾಪುರಿ ಜಗದ್ಗುರುಗಳ ಮಾರ್ಗದರ್ಶನದಲ್ಲಿ ದೋರನಹಳ್ಳಿ ಹಿರೇಮಠದ ಸಕಲ ಸದ್ಭಕ್ತರನ್ನು ಸನ್ಮಾರ್ಗದತ್ತ ಕರೆದೊಯ್ಯುವ ಜವಾಬ್ದಾರಿ ನಮ್ಮದಾಗಿದೆ ಎಂದರು.


Spread the love

LEAVE A REPLY

Please enter your comment!
Please enter your name here