ವಿಜಯಸಾಕ್ಷಿ ಸುದ್ದಿ, ತುಮಕೂರು: ಚುನಾವಣಾ ದೃಷ್ಟಿಯಲ್ಲಿ ರೂಪಿತವಾಗುವ ಎಲ್ಲಾ ಯೋಜನೆಗಳನ್ನು ರದ್ದುಮಾಡಿ ಜನಪರ ಬಜೆಟ್ ಹೆಸರಿನಲ್ಲಿ ಹಣ ಹಂಚಿಕೆಯಾಗುತ್ತಿರುವುದು ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ಆಗಿದೆ. ಚುನಾವಣೆ ವ್ಯವಸ್ಥೆಯಲ್ಲಿ ಹಣ ಹಂಚಿಕೆಯಾಗುವುದನ್ನು ತಡೆಗಟ್ಟುವ ಮೂಲಕ ಚುನಾವಣಾಗಳಲ್ಲಿ ಸುಧಾರಣೆ ತರಲು ಸಾಧ್ಯ ಎಂದು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
ತುಮಕೂರಿನ ಕನ್ನಡ ಭವನದಲ್ಲಿ ಜೆ.ಹೆಚ್. ಪಟೇಲ್ ಪ್ರತಿಷ್ಠಾನದ ವತಿಯಿಂದ ಜೆ.ಹೆಚ್. ಪಟೇಲ ಅವರ 96ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ `ವ್ಯವಸ್ಥೆಯ ಸುಧಾರಣೆಯಲ್ಲಿ ನಮ್ಮ ಪಾತ್ರ’ ಎಂಬ ವಿಷಯದ ಕುರಿತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಗೃಹಲಕ್ಷ್ಮೀ ಶಕ್ತಿ ಯೋಜನೆಗಳಿಂದ ಮಹಿಳೆಯರ ಸಬಲೀಕರಣ ಸಾಧ್ಯವಿಲ್ಲ. ಹಾಗೆಯೇ ವಿಶ್ವದ ಏಳನೇ ದೊಡ್ಡ ರಾಷ್ಟ್ರವಾಗಿರುವ ಭಾರತ ಸಾಲದಲ್ಲಿಯೂ ಏಳನೇ ಸ್ಥಾನದಲ್ಲಿ ಇರುವುದು ವಿಪರ್ಯಾಸ ಎಂದರು.
ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲರು ತಮ್ಮ ಸಹೋದರಿಯನ್ನೇ ಜಿ.ಪಂ ಅಧ್ಯಕ್ಷರನ್ನಾಗಿಸಬೇಕು ಎಂಬ ಒತ್ತಡವಿದ್ದರೂ ನನ್ನನ್ನು ಜಿ.ಪಂ ಅಧ್ಯಕ್ಷರನ್ನಾಗಿಸಿ ಕುಟುಂಬವನ್ನು ರಾಜಕೀಯದಿಂದ ದೂರ ಉಳಿಯುವಂತೆ ಮಾಡಿದರು. ಇಂಥವರ ಸಂಖ್ಯೆ ರಾಜಕಾರಣದಲ್ಲಿ ಹೆಚ್ಚಾದಾಗ ಮಾತ್ರ ಧ್ವನಿ ಇಲ್ಲದ ಸಮುದಾಯಗಳಿಗೆ ರಾಜಕೀಯ ಅಧಿಕಾರ ದೊರೆಯಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೆ.ಹೆಚ್. ಪಟೇಲ್ ಪ್ರತಿಷ್ಠಾನದ ವ್ಯವಸ್ಥಾಪಕರಾದ ಮಹಿಮ ಜೆ.ಪಟೇಲ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಎಂ.ಪಿ. ನಾಡಗೌಡ ವಹಿಸಿದ್ದರು. ಶಾಸಕರ ಜಿ.ಬಿ. ಜ್ಯೋತಿಗಣೇಶ, ಜೆ.ಹೆಚ್. ಪಟೇಲ್ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಶೂಲ ಪಾಣಿ, ಧರ್ಮದರ್ಶಿ ಟಿ. ಪ್ರಭಾಕರ, ಜೆ.ಡಿ.ಯು ಆಗ್ನೇಯ ಪದವೀಧರ ಕ್ಷೇತ್ರದ ಜೆಡಿಯು ಅಭ್ಯರ್ಥಿ ಡಾ. ಕೆ. ನಾಗರಾಜು, ಡಾ. ಎಸ್.ಎಸ್. ರಡ್ಡೇರ ಐಪಿಸಿಪಿ ರಾಜ್ಯ ಅಧ್ಯಕ್ಷರು ಉಪಸ್ಥಿತರಿದ್ದರು.
ಜನರನ್ನು ಯಾರು ಅನುಸರಿಸುತ್ತಾರೋ ಅವರು ಜನನಾಯಕರು ಎನ್ನುವಂತಹ ಪರಿಸ್ಥಿತಿ ಬದಲಾಗಿದೆ. ಜಾತಿಯ ಸೋಂಕು ಮಿತಿ ಮೀರಿದೆ. ಸಿದ್ದರಾಮಯ್ಯ ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಲು ಹೊರಟಿರುವುದು ನಿಜಕ್ಕೂ ನಂಬಲು ಸಾಧ್ಯವಿಲ್ಲ. ಲಿಂಗಾಯತರು ನಮ್ಮನ್ನು ಓಬಿಸಿ ಸೇರಿಸಿ ಎನ್ನುವುದರಲ್ಲಿ ತಪ್ಪಿಲ್ಲ ಎನಿಸುತ್ತದೆ. ಕೆ.ಎನ್. ರಾಜಣ್ಣ ಸತ್ಯ ಹೇಳಿ ಮಂತ್ರಿ ಸ್ಥಾನ ಕಳೆದುಕೊಂಡರು. ಚುನಾಯಿತ ಪ್ರತಿನಿಧಿಯನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುವ ಹೈಕಮಾಂಡ್ ಸಂಸ್ಕೃತಿಗೆ ಕಡಿವಾಣ ಹಾಕಬೇಕಾಗಿದೆ ಎಂದು ಜೆ.ಸಿ. ಮಾಧುಸ್ವಾಮಿ ಹೇಳಿದರು.