ಗದಗ:- ರೈತರ ಬೆಳೆ ಖರೀದಿಸಲು ದುಡ್ಡಿಲ್ಲ, ಶಾಸಕರನ್ನು ಖರೀದಿಸಲು ದುಡ್ಡಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರ ಆರಂಭ ಮಾಡಿ ಎಂದರೆ ಸರ್ಕಾರ ಈಗ ಶಾಸಕರನ್ನು ಖರೀದಿ ಮಾಡಲು ಖರೀದಿ ಕೇಂದ್ರ ತೆರೆದಿದೆ. ಒಬ್ಬೊಬ್ಬ ಶಾಸಕರಿಗೆ 50 ರಿಂದ 60 ಕೋಟಿ ರೂ. ಹಣ ಕೊಟ್ಟಿದ್ದಾರಂತೆ. ಮುಂದೆ ಇನ್ನೂ ಕೊಡ್ತಾರೆ ಅಂತ ಹೇಳಿ ಖರೀದಿ ಮಾಡುತ್ತಿದ್ದಾರೆ. ತಮ್ಮ ಶಾಸಕರನ್ನು ಖರೀದಿ ಮಾಡಲು ಖರೀದಿ ಕೇಂದ್ರ ಆರಂಭ ಮಾಡಿದ್ದಾರೆ ವಿನಾ: ರೈತರು ಬೆಳೆದ ಬೆಳೆಗೆ ಖರೀದಿ ಕೇಂದ್ರ ಆರಂಭಿಸಿಲ್ಲ ಎಂದು ಸಿಟ್ಟು ಹೊರಹಾಕಿದರು.
ರೈತರ ಬೆಳೆ ಖರೀದಿ ಮಾಡಲು ನಿಮ್ಮಲ್ಲಿ ಹಣವಿಲ್ಲ. ಆದರೆ ಶಾಸಕರನ್ನು ಖರೀದಿ ಮಾಡಲು ನಿಮ್ಮಲ್ಲಿ ಹಣವಿದೆ. ಯಾವ ಪುರುಷಾರ್ಥಕ್ಕಾಗಿ ಸರ್ಕಾರ ನಡೆಸುತ್ತಿದ್ದೀರಿ. ಒಬ್ಬರು ಕುರ್ಚಿ ಉಳಿಸಿಕೊಳ್ಳಲು, ಇನ್ನೊಬ್ಬರು ಕುರ್ಚಿ ಪಡೆಯಲು ಎರಡು ಕಡೆಯಿಂದ ಖರೀದಿ ನಡೆದಿದೆ. ಇದರಲ್ಲಿ ಕಾಂಗ್ರೆಸ್ ಶಾಸಕರು ಲಕ್ಕಿ ಪರ್ಸನ್. ಕಾಂಗ್ರೆಸ್ ಶಾಸಕರು ಉದ್ದಾರ ಆಗುತ್ತಿದ್ದಾರೆ. ಇದರಿಂದ ರಾಜ್ಯಕ್ಕೆ ನಷ್ಟವಾಗುತ್ತಿದೆ. ರಾಜ್ಯದ ಜನ ಸಾಮಾನ್ಯರ, ರೈತರ ಸಮಸ್ಯೆ ಕೇಳಲಾರದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರವಿದೆ ಎಂದರು.



