ಕೊಟ್ಯಾಂತರ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ವಂಚಕ ಸುಕೇಶ್ ಜೊತೆ ಸ್ನೇಹ ಮಾಡಿದ್ದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಸದ್ಯಕ್ಕೆ ವಂಚನೆ ಪ್ರಕರಣದಿಂದ ಮುಕ್ತಿ ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ಇದೀಗ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸುವಂತೆ ಕೋರಿ ನಟಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರು ಮೂಲದ ವಂಚಕ ಸುಕೇಶ್ ₹200 ಕೋಟಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದಾರೆ. ಈತನ ಜೊತೆಗಿನ ಸ್ನೇಹ ಹಾಗೂ ಪಡೆದುಕೊಂಡ ಉಡುಗೊರೆ ಕಾರಣದಿಂದಾಗಿ ಜಾಕ್ವೇಲಿನ್ ಕೋರ್ಟ್ ಮೆಟ್ಟಿಲೇರುವಂತಾಗಿದೆ.
ಈ ಹಿಂದೆ ಪ್ರಕರಣದಿಂದ ತಮ್ಮ ಹೆಸರನ್ನು ಕೈ ಬಿಡುವಂತೆ ನಟಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅವರ ಅರ್ಜಿಯನ್ನು ವಜಾಗೊಳಿಸಲಾಯಿತು. ಹೈಕೋರ್ಟ್‌ನ ತೀರ್ಪಿನಿಂದ ನಿರಾಶೆಗೊಂಡ ಜಾಕ್ವೇಲಿನ್ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಹಿಂದಿನ ನ್ಯಾಯಾಲಯದ ವಿಚಾರಣೆಯಲ್ಲಿ, ಜಾರಿ ನಿರ್ದೇಶನಾಲಯ (ಇಡಿ) ವಿಶೇಷ ನ್ಯಾಯಾಲಯವು ಈಗಾಗಲೇ ಚಾರ್ಜ್‌ಶೀಟ್ ಅನ್ನು ಗಮನಕ್ಕೆ ತೆಗೆದುಕೊಂಡಿದೆ ಎಂದು ಸ್ಪಷ್ಟವಾಗಿ ಹೇಳಿತ್ತು. ಇದರಿಂದಾಗಿ ಅವರ ಅರ್ಜಿಯನ್ನು ಅಂಗೀಕರಿಸಲಾಗುವುದಿಲ್ಲ ಎನ್ನಲಾಗಿತ್ತು.
ಸುಖೇಶ್ ಅವರಿಂದ ಪಡೆದ ಉಡುಗೊರೆಗಳನ್ನು ಅಪರಾಧದ ಆದಾಯದಿಂದ ಖರೀದಿಸಲಾಗಿದೆ ಎಂದು ಜಾಕ್ಲಿನ್ ವಕೀಲರು ವಾದಿಸಿದರು. ನಟಿಗೆ ಹಣ ವರ್ಗಾವಣೆ ಅಥವಾ ವಂಚನೆಯೊಂದಿಗೆ ಯಾವುದೇ ಸಂಬಂಧವಿಲ್ಲದಿದ್ದರೂ, ಅವರನ್ನು ಈ ಪ್ರಕರಣದಲ್ಲಿ ತರಲಾಗಿದೆ ಎಂದು ಆರೋಪಿಸಿದ್ದಾರೆ.