ಬೆಂಗಳೂರು/ಕಾರವಾರ:- ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರಿಗೆ ನೀಡಲಾಗಿದ್ದ ಮಧ್ಯಂತರ ಜಾಮೀನು ರದ್ದು ಆಗಿದ್ದು, ಇದೀಗ ಅವರು ಮತ್ತೆ ಜೈಲು ಪಾಲಾಗಿದ್ದಾರೆ.
ಬೆಲೇಕೇರಿ ಬಂದರಿನಿಂದ ನಡೆದಿದ್ದ ಅಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಸತೀಶ್ ಸೈಲ್ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ನವೆಂಬರ್ 7ರವರೆಗೆ ಜಾಮೀನು ವಿಸ್ತರಣೆ ಮಾಡಿತ್ತು. ಆದರೆ ಇಂದು ನ್ಯಾಯಾಲಯ ಜಾಮೀನು ರದ್ದುಪಡಿಸಿರುವುದರಿಂದ ಸೈಲ್ ಅವರನ್ನು ಮತ್ತೆ ಬಂಧನ ಮಾಡಲಾಗಿದೆ. ಇದೇ ಪ್ರಕರಣದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಅವರ ನಿವಾಸದ ಮೇಲೆ ದಾಳಿ ನಡೆಸಿ ಕೋಟ್ಯಂತರ ಮೌಲ್ಯದ ಚಿನ್ನಾಭರಣ ಮತ್ತು ನಗದು ವಶಪಡಿಸಿಕೊಂಡಿದ್ದರು.
ಆರೋಗ್ಯ ಸಮಸ್ಯೆಯಿಂದಾಗಿ ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೈಲ್ ಅವರಿಗೆ ಹೈಕೋರ್ಟ್ ಅಕ್ಟೋಬರ್ 25ರವರೆಗೆ ಜಾಮೀನು ನೀಡಿತ್ತು. ನಂತರ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಅವರು ಜಾಮೀನು ವಿಸ್ತರಣೆಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಇದೀಗ ನ್ಯಾಯಾಲಯದ ತೀರ್ಪಿನಂತೆ ಸೈಲ್ ಅವರಿಗೆ ಮತ್ತೆ ಜೈಲು ಜೀವನ ತಪ್ಪದಂತಾಗಿದೆ.


