ಕಲಬುರಗಿ : ಆಳಂದದ ಲಾಡ್ಲೆ ಮಶಾಕ್ ದರ್ಗಾದ ಆವರಣದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು 15 ಜನರಿಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮಠಾಧಿಪತಿಗಳ ವಿರುದ್ಧ ಕಿಡಿಕಾರಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯ 15 ಜನರಿಗೆ ಅನುಮತಿ ನೀಡಿದ್ದು ಅದರಲ್ಲಿ ನಾನೂ ಒಬ್ಬ ಹೋಗುತ್ತೇನೆ. ಅಲ್ಲಿ ಪೂಜೆ ಮಾತ್ರ ಮಾಡುತ್ತೇವೆ. ಯಾವುದೇ ಗದ್ದಲ ಗೊಂದಲ ಇಲ್ಲವೇ ಇಲ್ಲ. ವಕ್ಫ್ ಬೋರ್ಡ್ ಟ್ರಿಬ್ಯೂನಲ್ ಆಂದೋಲಾ ಸ್ವಾಮೀಜಿಗೆ ಬ್ಯಾನ್ ಮಾಡಿದೆ. ಅದು ಇಸ್ಲಾಂಗೆ ಸಂಬಂಧಿಸಿದ ಕೋರ್ಟ್, ಅದನ್ನು ನಾವ್ಯಾಕೆ ಒಪ್ಪಬೇಕು ಎಂದರು.
ಸಾವಿರಾರು ವರ್ಷಗಳಿಂದ ಪೂಜೆ ನಡೆಯುತ್ತಿರುವ ದೇವರಿಗೆ ಪೂಜೆ ಸಲ್ಲಿಸಲು ಕೋರ್ಟ್ ಅನುಮತಿ ಪಡೆಯಬೇಕು ಎನ್ನುವುದೇ ನಾಚಿಕೆಗೇಡಿನ ಸಂಗತಿ, ಈ ರೀತಿಯ ವ್ಯವಸ್ಥೆಯ ವಿರುದ್ದ ಹೋರಾಟ ನಮ್ಮದು
ರಾಘವ ಚೈತನ್ಯ ಶಿವಲಿಂಗಕ್ಕೆ ನೂರಾರು ವರ್ಷಗಳಿಂದ ಪೂಜೆ ನಡೆಯುತ್ತಿದೆ. ಇವತ್ತು ನ್ಯಾಯಾಲಯದ ನಿರ್ದೇಶನದಂತೆ ಪೂಜೆ ಮುಗಿಸಿ ಮುಂದಿನ ಹೋರಾಟ ಮಾಡುತ್ತೇವೆ. ಬರುವ ಯುಗಾದಿಗೆ ಆಂದೋಲಾ ಸ್ವಾಮೀಜಿ ನೇತೃತ್ವದಲ್ಲಿ ಮತ್ತೆ ಪೂಜೆ ಮಾಡುತ್ತೇವೆ ಎಂದರು.
ಶ್ರೀರಾಮ ಸೇನೆ, RSS, ವಿಶ್ವ ಹಿಂದೂ ಪರಿಷತ್ ಸೇರಿ ಕೆಲವರನ್ನು ಬಿಟ್ಟರೆ ಉಳಿದವರು ಯಾಕೆ ಬಾಯಿ ಮುಚ್ಚಿ ಕುಳಿತಿದ್ದಾರೋ ?ಉಳಿದ ಸ್ವಾಮೀಜಿಗಳೇ ನೀವೇನು ನಿದ್ರೆ ಮಾಡ್ತಿದಿರಾ..?, ನಿಮ್ಮ ಮಠದ ಒಳಗಡೆ ಇರುವ ಲಿಂಗಕ್ಕೂ ನಾಳೆ ಮಲಮೂತ್ರ ಎರಚುತ್ತಾರೆ. ಸ್ವಾಮಿಜಿಗಳೇ, ನೀವು ಕಣ್ಣು ತೆರಿರಿ, ಆಂದೋಲಾ ಸ್ವಾಮೀಜಿಗಳನ್ನು ಬ್ಯಾನ್ ಮಾಡಿದ್ದಾರೆ. ಆದ್ರೂ ಒಬ್ಬ ಸ್ವಾಮಿಯೂ ತುಟಿ ಪಿಟಕ್ ಎನ್ನುತ್ತಿಲ್ಲ. ನರಸತ್ತವರ ರೀತಿ ವರ್ತನೆ ಮಾಡಬೇಡಿ ಮಠಾಧಿಪತಿಗಳೇ ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.