ವಿಜಯಸಾಕ್ಷಿ ಸುದ್ದಿ, ಪುತ್ತೂರು: ದಿ. ಚಿದಾನಂದ ಕಾಮತ್ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಅವರ ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸಿ ಹೊಸ ಕವಿಗಳಿಗೆ ವೇದಿಕೆಯನ್ನು ಕಲ್ಪಿಸಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಸಾಹಿತ್ಯದ ಬಗ್ಗೆ ಇನ್ನಷ್ಟು ಒಲವು ತೋರಿಸಿ ಭಾಷಾ ವೈವಿಧ್ಯತೆಯನ್ನು ಹೆಚ್ಚಿಸಬೇಕೆಂದು ಪುತ್ತೂರಿನ ಪ್ರಗತಿ ಎಜುಕೇಶನಲ್ ಫೌಂಡೇಶನ್ ಸ್ಥಾಪಕಾಧ್ಯಕ್ಷ ಗೋಕುಲ್‌ನಾಥ್ ಪಿ.ವಿ ಅಭಿಪ್ರಾಯಪಟ್ಟರು
ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ನೇತೃತ್ವದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ, ಪ್ರಗತಿ ಸ್ಟಡಿ ಸೆಂಟರ್ ಆಶ್ರಯದಲ್ಲಿ, ದಿ. ಚಿದಾನಂದ ಕಾಮತ್ ಕಾಸರಗೋಡು ಇವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ಮುಂಗಾರು ಕವಿಗೋಷ್ಠಿ-2025 ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ.ಸಾ.ಪ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮಾತನಾಡಿ, ಚಿಗುರೆಲೆ ಸಾಹಿತ್ಯ ಬಳಗ ಹಾಗೂ ಕ.ಸಾ.ಪ ಸಹಯೋಗದಲ್ಲಿ ಈಗಾಗಲೇ ಹಲವು ಸಾಹಿತ್ಯ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿದ್ದು, ನೂರಾರು ಕವಿಗಳಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸುದ್ದಿ ನಿರೂಪಕಿ ಹೇಮಾ ಜಯರಾಮ್, ಪ್ರಕಾಶಕ ಮಹೇಶ್ ಆರ್.ನಾಯಕ್, ವರದಿಗಾರ ಇಬ್ರಾಹಿಂ ಖಲೀಲ್ ಬನ್ನೂರು, ಪ್ರಗತಿ ಸ್ಟಡಿ ಸೆಂಟರ್ ಪ್ರಾಂಶುಪಾಲೆ ಹೇಮಲತಾ ಎನ್, ಚಿಗುರೆಲೆ ಸಾಹಿತ್ಯ ಬಳಗದ ಸ್ಥಾಪಕಾಧ್ಯಕ್ಷ ಚಂದ್ರಮೌಳಿ ಕಡಂದೇಲು, ನಾರಾಯಣ ಕುಂಬ್ರ ಮಾತನಾಡಿದರು. ಪೊಲೀಸ್ ಅಧಿಕಾರಿ, ಸಾಹಿತಿಗಳಾದ ಹರೀಶ್ ಮಂಜೊಟ್ಟಿ, ಬಾಬು ಎಂ, ಸುದರ್ಶನ್ ಮುರ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮ ಬಳಿಕ ನಡೆದ ಕವಿಗೋಷ್ಠಿಯಲ್ಲಿ ಕಪ್ಪತ್ತಗಿರಿ ಸಾಹಿತ್ಯ, ಕಲಾ ಮತ್ತು ಸಾಂಸ್ಕೃತಿಕ ವೇದಿಕೆ ಗದಗ ಜಿಲ್ಲಾ ಸ್ಥಾಪಕಾಧ್ಯಕ್ಷೆ ಚಂದ್ರಕಲಾ ಎಂ.ಇಟಗಿಮಠ ಅಧ್ಯಕ್ಷತೆ ವಹಿಸಿದ್ದರು. ಗಿರೀಶ್ ಕೊಯಿಲ, ಸುನೀತಾ ಎನ್, ಸೌಜನ್ಯ ಬಿ.ಎಂ ಕೆಯ್ಯೂರು ಹಾಗೂ ಶ್ರೀಕಲಾ ಕಾರಂತ್ ಅಳಿಕೆ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಕೀರ್ತನ ಪ್ರಾರ್ಥಿಸಿದರು. ಪ್ರಮೀಳ ಎನ್.ಡಿ ಸ್ವಾಗತಿಸಿದರೆ, ಪ್ರಿಯಾ ಸುಳ್ಯ ವಂದಿಸಿದರು.