ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಡೆಂಘೀ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಡೆಂಘೀ ನಿಯಂತ್ರಣದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಎಂದು ಗದಗ ಜಿ.ಪಂ ಯೋಜನಾ ನಿರ್ದೇಶಕರು ಮತ್ತು ತಾ.ಪಂ ಆಡಳಿತಾಧಿಕಾರಿ ಎಂ.ವಿ. ಚಳಗೇರಿ ನಿರ್ದೇಶನ ನೀಡಿದರು.
ಅವರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಹಾಗೂ ಡೆಂಘೀ ನಿಯಂತ್ರಣ ಕುರಿತಂತೆ ಕರೆಯಲಾಗಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡಿದರು.
ಸೋಂಕು ನಿವಾರಣೆಗಾಗಿ ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ, ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು. ಲಕ್ಷ್ಮೇಶ್ವರ ಪಟ್ಟಣ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಮನೆ ಬಾಗಿಲಿಗೆ ತೆರಳಿ ಸಮೀಕ್ಷೆ ಕೈಗೊಳ್ಳಬೇಕು. ಅಲ್ಲಲ್ಲಿ ನೀರು ಸಂಗ್ರಹಗೊಳ್ಳದಂತೆ ಜಾಗೃತಿ ಮೂಡಿಸಬೇಕು. ಎಲ್ಲಿಯಾದರೂ ಮನೆಗಳಲ್ಲಿ ನೀರು ಸಂಗ್ರಹಗೊಂಡಿರುವುದು ಗಮನಕ್ಕೆ ಬಂದರೆ ತಕ್ಷಣ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಬೇಕು. ಸರಕಾರಿ ಮತ್ತು ಖಾಸಗಿ ಪ್ರದೇಶಗಳಲ್ಲಿ ನೀರು ನಿಂತಿರುವ ಕಡೆಗಳಲ್ಲಿ ಸೊಳ್ಳೆ ನಿಯಂತ್ರಣ ದ್ರಾವಣ ಸಿಂಪರಣೆ ಮಾಡಬೇಕೆಂದು ಸೂಚನೆ ನೀಡಿದರು.
ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಿ.ಎಸ್. ಹಿರೇಮಠ ಮಾತನಾಡಿ, ಡೆಂಘೀ ಜ್ವರ ವೈರಸ್‌ನಿಂದ ಬರುವ ಸಾಂಕ್ರಾಮಿಕ ರೋಗವಾಗಿದ್ದು, ಇದು ಸೋಂಕಿತ ಈಡಿಸ್ ಜಾತಿಯ ಸೊಳ್ಳೆಯ ಕಡಿತದಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಬಹುತೇಕ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ.
ಹಾಗಾಗಿ ಡೆಂಘಿ ಜ್ವರ ಹತೋಟಿ ಪ್ರತಿಯೊಬ್ಬರ ಕೈಯಲ್ಲಿದೆ. ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಈ ನಿಟ್ಟಿನಲ್ಲಿ ಅಗತ್ಯ ಜಾಗೃತಿ ಕಾರ್ಯಕ್ರಮಗಳನ್ನು ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡು ಡೆಂಘೀ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಇಲಾಖಾವಾರು ಮಾಸಿಕ ಪ್ರಗತಿ ಪರಿಶೀಲನೆ ಮಾಡಲಾಯಿತು. ತಾಲೂಕು ಪಂಚಾಯಿತಿ ವಾರ್ಷಿಕ ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆಯಲಾಯಿತು. ಲಿಂಕ್ ಡಾಕ್ಯುಮೆಂಟ್‌ಗೆ ಅನುಮೋದನೆ, ಅನಿರ್ಬಂಧಿತ ಅನುದಾನ ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯಲಾಯಿತು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು, ತಾ.ಪಂ ಸಿಬ್ಬಂದಿಗಳಾದ ಬಿ.ಬಿ. ತಳವಾರ, ಮಾರುತಿ ಕೊಡ್ಲಿ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು, ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಇದ್ದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ ಕರ್ಜಗಿ ಮಾತನಾಡಿ, ಮನೆಯ ಒಳಗೆ ಮತ್ತು ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಿ ಸೊಳ್ಳೆ ಉತ್ಪತ್ತಿಯನ್ನು ತಡೆಗಟ್ಟಬೇಕು. ಮನೆಯ ಒಳಗೆ ಸೊಳ್ಳೆ ಬರದಂತೆ ಕಿಟಕಿ, ಬಾಗಿಲುಗಳಿಗೆ ಜಾಲರಿ ಅಳವಡಿಸುವುದು ಹಾಗೂ ಸೊಳ್ಳೆ ನಿರೋಧಕ ಬಳಸಬೇಕು. ಮಲಗುವಾಗ ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು. ಸಾರ್ವಜನಿಕರು ಈ ಕ್ರಮಗಳನ್ನು ಅನುಸರಿಸುವಂತೆ ಜಾಗೃತಿ ಮೂಡಿಸಬೇಕು ಎಂದರು.