ವಿಜಯಸಾಕ್ಷಿ ಸುದ್ದಿ, ಗದಗ: ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತಂದಿರುವ ಪ್ರಧಾನಿ ಮೋದಿ ಮಹಿಳಾ ಸಮಾನತೆ ವಿಷಯದಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಬಸವಣ್ಣನ ರೀತಿಯಲ್ಲಿ ಮಹಿಳಾ ಸಮಾನತೆ ಪ್ರತಿಪಾದಿಸಿದ ಮೋದಿ ಅವರು ಅಭಿನವ ಬಸವಣ್ಣ ಎಂದು ಸಂಸದ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟರು.
ಶುಕ್ರವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2028ರ ಸಾರ್ವತ್ರಿಕ ಚುನಾವಣೆಯಿಂದ ಮಹಿಳೆಯರಿಗೆ ಶೇಕಡಾ 33ರ ಮೀಸಲಾತಿ ಕಡ್ಡಾಯವಾಗಿ ಜಾರಿಯಾಗಲಿದೆ. ಕೇಂದ್ರ ಸರ್ಕಾರ ಈ ಉದ್ದೇಶದಿಂದಲೇ ಜನಗಣತಿ ಮತ್ತು ಜಾತಿಗಣತಿ ನಡೆಸಲು ನಿರ್ಧರಿಸಿದೆ. ಅಂದು ಬಸವಣ್ಣವರು ಮಹಿಳಾ ಸಮಾನತೆಗೆ ಹೋರಾಡಿದರು. ಇಂದು ಮೋದಿ ಮಹಿಳಾ ಸಮಾನತೆಯನ್ನು ಜಾರಿಗೆ ತಂದಿದ್ದಾರೆ ಎಂದರು.
ಮಹಿಳಾ ಮೀಸಲಾತಿ ಮಸೂದೆಗೆ ಸಂಸತ್‌ನಲ್ಲಿ ಈಗಾಗಲೇ ಅನುಮೋದನೆ ದೊರಕಿದೆ. ಈ ಸಮೀಕ್ಷೆಗಳ ಆಧಾರದ ಮೇಲೆ 2028ರ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ರಾಜಕೀಯ ಅವಕಾಶಗಳು ಲಭ್ಯವಾಗಲಿವೆ. ಈ ನಡುವೆಯೇ ಮಧ್ಯಂತರ ಚುನಾವಣೆ ನಡೆದರೆ ಸದರಿ ಕಾನೂನು ಅನ್ವಯಿಸುವುದಿಲ್ಲ ಎಂದು ಮಾಹಿತಿ ನೀಡಿದರು.
ಕ್ಷೇತ್ರ ಪುನರ್‌ವಿಂಗಡಣೆಗೂ ಮತ್ತು ಮಹಿಳಾ ಮೀಸಲಾತಿಗೂ ಯಾವುದೇ ಸಂಬಂಧವಿಲ್ಲ. ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆಯ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳ ಪುನರ್‌ವಿಂಗಡಣೆ ಅಧಿಕಾರ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದೆ. ಹಾಗಾಗಿ, ಮಹಿಳೆಯರು ಈ ಬಗ್ಗೆ ಗೊಂದಲಕ್ಕೆ ಒಳಗಾಗಬಾರದು ಎಂದರು.



