ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗದಗ ಜಿಲ್ಲೆಯಲ್ಲಿ ಪಿಓಪಿ ಗಣೇಶ ಮೂರ್ತಿಗಳ ಮಾರಾಟಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಪರಿಸರ ಇಲಾಖೆ ಅಧಿಕಾರಿಗಳು ಗುರುವಾರ ಪಟ್ಟಣದಲ್ಲಿ ಗಣೇಶ ಮೂರ್ತಿ ತಯಾರಿಸುವ ಹಲವೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸುಮಾರು 35-40 ಮೂರ್ತಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ರಾಜ್ಯ ಸರಕಾರ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಮಾರಾಟಕ್ಕೆ ಮಾತ್ರ ಪರವಾನಿಗೆ ಕೊಟ್ಟಿದ್ದು, ಕೆಲವೊಂದು ಕಡೆ ಪಿಓಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ ಎನ್ನುವ ಸುದ್ದಿಯ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯ ಯೋಜನಾ ಸಹಾಯಕ ವಿಕಾಸ ಪಟ್ಟಣಶೆಟ್ಟಿ ಪಟ್ಟಣಕ್ಕೆ ಭೇಟಿ ನೀಡಿ ಪರಿಶೀಲಿಸಿ ಮೂರ್ತಿಗಳನ್ನು ಜಪ್ತಿ ಮಾಡಿದ್ದು, ಅವುಗಳನ್ನು ಪುರಸಭೆಯವರು ವಾಹನದಲ್ಲಿ ಹೇರಿಕೊಂಡು ಪುರಸಭೆಯ ಆವರಣಕ್ಕೆ ಸಾಗಿಸಿದ್ದಾರೆ.
ಗುರುವಾರ ಪಟ್ಟಣದ ಹಾವಳಿ ಹನಮಂತ ದೇವಸ್ಥಾನ, ಪಂಪ ಸರ್ಕಲ್, ಕುಂಬಾರ ಓಣಿ ಸೇರಿದಂತೆ ಪಟ್ಟಣದಲ್ಲಿ ಗಣೇಶ ಮೂರ್ತಿ ಮಳಿಗೆಗಳಿಗೆ ಭೇಟಿ ನೀಡಿ ಒಟ್ಟು 40ಕ್ಕೂ ಅಧಿಕ ಮೂರ್ತಿಗಳನ್ನು ಗುರುತಿಸಿ ಜಪ್ತಿ ಮಾಡಲಾಯಿತು.
ಈ ವೇಳೆ ಕೆಲವು ಗಣೇಶನ ಮೂರ್ತಿ ತಯಾರಕರು ತಕರಾರು ತೆಗೆದು ಪಿಓಪಿ ಗಣೇಶನ ಮೂರ್ತಿಗಳನ್ನು ತಯಾರಿಸುವುದು, ಮಾರಾಟ ಮಾಡುವದನ್ನು ನಿಷೇಧಿಸಿದ್ದು, ಇದೀಗ ಕ್ರಮಕ್ಕೆ ಮುಂದಾಗಿರುವದು ಯಾಕೆ ಎಂದು ಪ್ರಶ್ನಿಸಿದರಲ್ಲದೆ, 1-2 ತಿಂಗಳು ಮುಂಚಿತವಾಗಿಯೇ ಪಿಓಪಿ ಮಾರಾಟಕ್ಕೆ ನಿಷೇಧ ಮಾಡಲಾಗಿರುವುದನ್ನು ಪ್ರಕಟಿಸಬಹುದಾಗಿತ್ತು. ಹೀಗೆ ಏಕಾಏಕಿ ಗಣೇಶನ ಮೂರ್ತಿಗಳನ್ನು ವಶಕ್ಕೆ ಪಡೆದುಕೊಳ್ಳುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಈ ವೇಳೆ ಮಾತನಾಡಿದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯ ಯೋಜನಾ ಸಹಾಯಕ ವಿಕಾಸ ಪಟ್ಟಣಶೆಟ್ಟಿ, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪಿಓಪಿ ಗಣೇಶನ ಮೂರ್ತಿಗಳ ಮಾರಾಟ ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಲಕ್ಷ್ಮೇಶ್ವರದಲ್ಲಿ ಮಾರಾಟಕ್ಕೆ ಇರುವ ಗಣೇಶನ ಮೂರ್ತಿಗಳನ್ನು ಪರಿಶೀಲಿಸಲಾಗಿ ಸುಮಾರು 40ಕ್ಕೂ ಅಧಿಕ ಮೂರ್ತಿಗಳು ಪಿಓಪಿ ಹಾಗೂ ರೆಡ್‌ಆಕ್ಸೈಡ್ ಮಿಶ್ರಿತ/ಒಳಗಡೆ ಪಿಓಪಿ ಇರುವ ಮೂರ್ತಿಗಳು ಕಂಡುಬಂದಿವೆ. ಆದ್ದರಿಂದ ಅವುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಅವುಗಳನ್ನು ಪುರಸಭೆಯ ಗೋಡಾನ್‌ನಲ್ಲಿ ಇಡಲಾಗುವದು. ಮುಂದಿನ ಆದೇಶದಂತೆ ಅವುಗಳ ಬಗ್ಗೆ ಕ್ರಮ ವಹಿಸಲಾಗುವದು. ಮತ್ತೆ ಅಂತಹ ಗಣೇಶನ ಮೂರ್ತಿಗಳು ಕಂಡು ಬಂದರೆ ತಕ್ಷಣ ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದರು.
ಈ ವೇಳೆ ಪುರಸಭೆ ಕಂದಾಯ ನಿರೀಕ್ಷಕರು, ಪುರಸಭೆ ಪೌರ ಕಾರ್ಮಿಕರು ಇದ್ದರು.
“ಪುರಸಭೆ ವ್ಯಾಪ್ತಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪಿಓಪಿ ಮೂರ್ತಿಗಳು ಮಾರಾಟಕ್ಕೆ ಬಂದಿದ್ದು, ಪುರಸಭೆ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕಾಗಿತ್ತು. ಇದೀಗ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದ ಮೂರ್ತಿಗಳನ್ನು ಪುರಸಭೆಯವರು ಗೋಡಾನ್‌ನಲ್ಲಿ ಸಂಗ್ರಹಿಸಿ ಮುಂದಿನ ಕ್ರಮ ತೆಗೆದುಕೊಳ್ಳಬೇಕು”
– ಮುತ್ತಣ್ಣ ಭರಡಿ.
ಜಿಲ್ಲಾ ಮಣ್ಣಿನ ಮೂರ್ತಿ ತಯಾರಕರ ಸಂಘದ ಅಧ್ಯಕ್ಷ.