ತುಮಕೂರು: ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಪೆನ್ನೋಬನಹಳ್ಳಿ ಗ್ರಾಮದಲ್ಲಿ ಜೋಳದ ಚಿಗುರು ಸಿಪ್ಪೆ ಸೇವಿಸಿದ ಪರಿಣಾಮ ಕುರಿಗಳು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಗ್ರಾಮದ ಜಂಪಕ್ಕ ಎಂಬುವರಿಗೆ ಸೇರಿದ ಸುಮಾರು 200ಕ್ಕೂ ಅಧಿಕ ಕುರಿಗಳ ಹಿಂಡಿನಲ್ಲಿ, 50ಕ್ಕೂ ಹೆಚ್ಚು ಕುರಿ ಮರಿಗಳು ಮೃತಪಟ್ಟಿವೆ. ಪ್ರತಿದಿನದಂತೆ ಮೊನ್ನೆ ಕುರಿಗಳನ್ನು ಮೇವಿಗಾಗಿ ಹೊಲದತ್ತ ಕರೆದೊಯ್ಯಲಾಗಿದ್ದು, ಎಂದಿನಂತೆ ಹುಲ್ಲು ಮೇಯುತ್ತಿದ್ದ ಕುರಿಗಳು ಏಕಾಏಕಿ ಕುಸಿದು ಬೀಳತೊಡಗಿವೆ. ಕೆಲವೇ ಕ್ಷಣಗಳಲ್ಲಿ 50ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ.
ಈ ಘಟನೆ ಕುರಿಗಾಹಿಗೆ ಭಾರೀ ಆಘಾತ ತಂದಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಪಶುಪಾಲನಾ ಇಲಾಖೆಯ ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,
ಕುರಿಗಳು ಜೋಳದ ಚಿಗುರು ಸಿಪ್ಪೆಯನ್ನು ಸೇವಿಸಿರುವುದು ಪತ್ತೆಯಾಗಿದೆ. ವೈದ್ಯಾಧಿಕಾರಿ ಅರ್ಕೆರಪ್ಪ ಅವರ ಪ್ರಕಾರ, ಜೋಳದ ಚಿಗುರು ಸಿಪ್ಪೆಯಲ್ಲಿ ಸೈನೆಡ್ ಅಂಶ ಇರುವುದರಿಂದ ಅದು ವಿಷವಾಗಿ ಪರಿಣಮಿಸಿ ಕುರಿಗಳ ಸಾವಿಗೆ ಕಾರಣವಾಗಿದೆ.



