ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಕರ್ನಾಟಕವನ್ನು ನಾವೀನ್ಯತೆ ಮತ್ತು ತಂತ್ರಜ್ಞಾನ ನಾಯಕತ್ವದ ಜಾಗತೀಕ ಕೇಂದ್ರವನ್ನಾಗಿ ಮಾಡುವ ಉದ್ದೇಶದಿಂದ ಬೆಂಗಳೂರಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನದಲ್ಲಿ ಇಲ್ಲಿಯ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಾಮಾಜಿಕ ವಿಜ್ಞಾನ ವಿಷಯ ಶಿಕ್ಷಕರಾದ ಕೀರ್ತಿ ಮ್ಯಾಗೇರಿ ಅವರ ಮಾರ್ಗದರ್ಶನದಲ್ಲಿ ೧೦ ಬಾಲಕಿಯರು ಭಾಗವಹಿಸಿದ್ದರು. ವಿದ್ಯಾರ್ಥಿ ಅನಸೂಯಾ ವಡ್ಡರ ನೇತೃತ್ವದ ತಂಡವು ನೈಸರ್ಗಿಕವಾದ ಸೊಳ್ಳೆ ಬತ್ತಿಯನ್ನು ತಯಾರಿಸಿತ್ತು. ವಸ್ತು ಪ್ರದರ್ಶನದಲ್ಲಿ ಸೊಳ್ಳೆ ಬತ್ತಿ ತಯಾರಿಸಿದ ಬಗೆ ಮತ್ತು ಅವುಗಳಿಗೆ ಬೇಕಾಗುವ ಕಚ್ಚಾ ವಸ್ತುಗಳು ಮತ್ತು ಮನುಷ್ಯನ ಆರೋಗ್ಯದ ಮೇಲೆ ಯಾವುದೇ ದುಷ್ಟಪರಿಣಾಮಗಳನ್ನು ಬೀರದ ಹಾಗೆ ಸೊಳ್ಳೆಗಳು ನಾಶವಾಗುವ ಬಗೆಯನ್ನು ಕುರಿತು ವಿವರಿಸಿದಳು.
ಈ ತಂಡದಲ್ಲಿ ಪೂರ್ಣಿಮಾ, ಪ್ರೇಮಾ, ಅರ್ಚನಾ, ಐಶ್ವರ್ಯ ಇದ್ದರು. ಹೇಮಲತಾ ಕುಲಕರ್ಣಿ ನೇತೃತ್ವದಲ್ಲಿ ಹರ್ಬಲ್ ಹೇರ್ ಆಯಿಲ್ ತಯಾರಿಸಿ ಪ್ರದರ್ಶಿಸಲಾಯಿತು. ಈ ಕುರಿತು ವಸ್ತು ಪ್ರದರ್ಶನಕ್ಕೆ ಆಗಮಿಸಿದ್ದ ವೀಕ್ಷಕರಿಗೆ ಮಾಹಿತಿ ನೀಡಿದರು. ಈ ತಂಡದಲ್ಲಿ ವೈಷ್ಣವಿ, ಕಾವೇರಿ, ವಿಜಯಲಕ್ಷ್ಮಿ ಸಹಕಾರ ನೀಡಿದರು. ಈ ಎರಡು ಉತ್ಪನ್ನಗಳನ್ನು ಟೈ ಗ್ಲೋಬಲ್ ಸಮ್ಮಿತ್‌ನಲ್ಲಿ ಪ್ರದರ್ಶಿಸಿದ್ದು ಎಲ್ಲರ ಗಮನ ಸೆಳೆಯಿತು.
ಗ್ರಾಮೀಣ ಭಾಗದ ಸರಕಾರಿ ಶಾಲೆಯ ಮಕ್ಕಳಿಗೆ ಬೆಂಗಳೂರು ಎನ್ನುವುದೇ ಒಂದು ಕನಸಾಗಿದ್ದು, ಇಂತಹ ಬೃಹತ್ ಉದ್ಯೋಗ ಮೇಳದಲ್ಲಿ ಲಕ್ಕುಂಡಿ ಶಾಲೆಯ ಮಕ್ಕಳು ಭಾಗವಹಿಸಿದ್ದು ಸೌಭಾಗ್ಯವಾಗಿದೆ. ತಾರೆ ಜಮೀನ್ ಪರ್ ಎಂಬ ಸಂಸ್ಥೆಯ ಗದಗ ಜಿಲ್ಲೆಯ ಸಂಘಟಿಕರಾದ ವಿಜಯಕುಮಾರ ಹಿರೇಮನಿ ಮತ್ತು ಸೂರ್ಯ ಅವರು ಗ್ರಾಮೀಣ ಭಾಗದ ಮಕ್ಕಳಲ್ಲಿ ವಿಜ್ಞಾನ ವಿಷಯದ ಮೂಲಕ ಔದ್ಯಮಿಕ ಶಿಕ್ಷಣ ನೀಡುವಲ್ಲಿ ನಮ್ಮ ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದು ವಿದ್ಯಾರ್ಥಿಗಳ ಭವಿಷ್ಯಕ್ಕೆ ನಾಂದಿಯಾಗಿದೆ ಎಂದು ವಿಜ್ಞಾನ ಶಿಕ್ಷಕಿ ಕೀರ್ತಿ ಮ್ಯಾಗೇರಿ ತಿಳಿಸಿದ್ದಾರೆ.



