ಡ್ರಗ್ಸ್ ಪ್ರಕರಣದಲ್ಲಿ ಖ್ಯಾತ ಮಲಯಾಳಂ ನಟ ಶೈನ್ ಟಾಮ್ ಚಾಕೋ ಅವರನ್ನು ಇತ್ತೀಚೆಗೆ ಅರೆಸ್ಟ್ ಮಾಡಲಾಗಿದೆ. ಶೂಟಿಂಗ್ ವೇಳೆ ಸೆಟ್ನಲ್ಲಿ ಡ್ರಗ್ಸ್ ಸೇವನೆ ಮಾಡಿದ ಹಾಗೂ ಸಹ ನಟಿಗೆ ಕಿರುಕುಳ ಕೊಟ್ಟ ಆರೋಪ ಶೈನ್ ಟಾಮ್ ಚಾಕೋ ಮೇಲಿತ್ತು. ನಟನ ಮೇಲೆ ಪ್ರಕರಣ ದಾಖಲಾಗುತ್ತಿದ್ದಂತೆ ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಆ ಬಳಿಕ ಜಾಮೀನಿನ ಮೇಲೆ ಹೊರ ಬಂದಿದ್ದು ಪೊಲೀಸರ ವಿಚಾರಣೆ ವೇಳೆ ಶೈಬ್ ಟಾಮ್ ಚಾಕೋ ಸಾಕಷ್ಟು ಶಾಕಿಂಗ್ ಮಾಹಿತಿಗಳನ್ನು ರಿವೀಲ್ ಮಾಡಿದ್ದಾರೆ ಎನ್ನಲಾಗಿದೆ.
ಶೈನ್ ಟಾಮ್ ಚಾಕೋ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದ್ದು ಈ ವೇಳೆ ಪೊಲೀಸರು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಶೈನ್ ಟಾಮ್ ಚಾಕೋ ಅವರು ಡ್ರಗ್ಸ್ ಬಳಕೆ ಮಾಡಿರೋ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ಮೆಥಾಂಫೆಟಮೈನ್ ಮತ್ತು ಕ್ಯಾನ್ಬಿಸ್ ಡ್ರಗ್ಸ್ನ ಇವರು ಬಳಕೆ ಮಾಡುತ್ತಿದ್ದರು ಎನ್ನಲಾಗಿದೆ. ಇಂಡಸ್ಟ್ರಿಯ ಕೆಲವು ಪ್ರಮುಖ ಕಲಾವಿದರು ಡ್ರಗ್ಸ್ ಸೇವನೆ ಮಾಡುತ್ತಾರೆ ಎಂಬ ವಿಚಾರವನ್ನು ವಿಚಾರಣೆ ವೇಳೆ ಶೈನ್ ಟಾಮ್ ಚಾಕೋ ಹೇಳಿದ್ದಾರೆ ಎನ್ನಲಾಗುತ್ತಿದೆ.
ತಾವು ಫೋನ್ ಮೂಲಕ ಸಂಪರ್ಕದಲ್ಲಿದ್ದ ವಿದೇಶಿ ಮಲಯಾಳಿ ಮಹಿಳೆಯನ್ನು ಭೇಟಿ ಮಾಡಲು ಕೊಚ್ಚಿಯ ವೇದಾಂತ ಹೋಟೆಲ್‌ಗೆ ಹೋಗಿದ್ದಾಗಿ ಶೈನ್ ಟಾಮ್ ಚಾಕೋ ಒಪ್ಪಿಕೊಂಡಿದ್ದಾರೆ. ಮಾದಕ ದ್ರವ್ಯಗಳ ವಹಿವಾಟು ನಡೆಸಿದ್ದಾಗಿಯೂ ಅವರು ಒಪ್ಪಿಕೊಂಡಿದ್ದಾರೆ. ಆದಾಗ್ಯೂ, ಈ ಡ್ರಗ್ಸ್ ವ್ಯವಹಾರಗಳಲ್ಲಿ ಭಾಗಿಯಾಗಿರುವ ನಿಖರವಾದ ವ್ಯಕ್ತಿಗಳು ಯಾರೆಂದು ತಮಗೆ ನೆನಪಿಲ್ಲ ಎಂದಿದ್ದು, ತಾವು ಯಾವಾಗ ತೆರಳಿದ್ದು, ಎಷ್ಟು ಗಂಟೆಗೆ ಅಲ್ಲಿ ವ್ಯವಹಾರ ನಡೆಸಿದೆ ಎಂಬಿತ್ಯಾದಿ ಮಾಹಿತಿಗಳು ಮರೆತು ಹೋಗಿದೆ ಎಂದು ವಿಚಾರಣೆ ವೇಳೆ ಹೇಳಿದ್ದಾರೆ.
‘ನಾನು ಸೇರಿದಂತೆ ಕೆಲವೇ ಕೆಲವು ಕಲಾವಿದರನ್ನು ಇಲ್ಲಿ ದೂಷಿಸಲಾಗುತ್ತದೆ. ಆದರೆ, ಬಹುತೇಕ ಕಲಾವಿದರು ಇಲ್ಲಿ ಡ್ರಗ್ಸ್ ಸೇವನೆ ಮಾಡುತ್ತಿದ್ದಾರೆ’ ಎಂದು ಶೈನ್ ಆರೋಪ ಮಾಡಿದ್ದಾರೆ.


