ಬೆಂಗಳೂರು:- ಮಗುವಿಗೆ ವಿಷಕೊಟ್ಟು ಬಳಿಕ ತಾನೂ ಸೇವಿಸಿ ತಾಯಿಯೋರ್ವಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ವ್ಯಾಪ್ತಿಯ ತಿಗಳರಪಾಳ್ಯದಲ್ಲಿ ಜರುಗಿದೆ.
ಘಟನೆಯಲ್ಲಿ ತಾಯಿ ಬದುಕುಳಿದರೆ, ಮಗು ಸಾವನ್ನಪ್ಪಿದೆ. 24 ವರ್ಷದ ಚಂದ್ರಿಕಾ ಎಂಬ ತಾಯಿ ತನ್ನ ಒಂದು ವರ್ಷ ಎಂಟು ತಿಂಗಳ ಮಗು ಚಾರ್ವಿಗೆ ಟೀಗೆ ಇಲಿಪಾಷಾಣ ಬೆರೆಸಿ ಕುಡಿಸಿ, ತಾನೂ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಘಟನೆಯಲ್ಲಿ ಮಗು ಚಾರ್ವಿ ಮೃತಪಟ್ಟಿದ್ದು, ಚಂದ್ರಿಕಾ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಹಣಕಾಸಿನ ಸಮಸ್ಯೆ ಮತ್ತು ಕುಟುಂಬದ ಜಗಳದಿಂದ ಬೇಸತ್ತ ಚಂದ್ರಿಕಾ, ಈ ಕೃತ್ಯಕ್ಕೆ ಮುಂದಾಗಿದ್ದಾಳೆ ಎಂದು ಶಂಕಿಸಲಾಗಿದೆ. ಚಂದ್ರಿಕಾ ತನ್ನ ಗಂಡ ಯೋಗೇಶ್‌ನೊಂದಿಗೆ ಹಣಕಾಸಿನ ವಿಚಾರಕ್ಕೆ ದಿನನಿತ್ಯ ಜಗಳದಿಂದ ಬೇಸತ್ತ ಹಿನ್ನೆಲೆಯಲ್ಲಿ ಈ ದಾರುಣ ನಿರ್ಧಾರ ಕೈಗೊಂಡಿದ್ದಾಳೆ ಎನ್ನಲಾಗಿದೆ.
ಘಟನೆಯ ಸಂದರ್ಭದಲ್ಲಿ ಯೋಗೇಶ್ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಿದ್ದಾಗ ಚಂದ್ರಿಕಾ ಈ ಕೃತ್ಯಕ್ಕೆ ಮುಂದಾಗಿದ್ದಾಳೆ. ನಂತರ ಚಂದ್ರಿಕಾ ತನ್ನ ಗಂಡನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಕೂಡಲೇ ಮನೆಗೆ ಧಾವಿಸಿದ ಯೋಗೇಶ್, ಪತ್ನಿ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಗು ಚಾರ್ವಿ ಮೃತಪಟ್ಟಿದ್ದಾಳೆ. ಸದ್ಯ ಚಂದ್ರಿಕಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಕೇಸ್ ದಾಖಲಾಗಿದೆ.