ಖ್ಯಾತ ಗಾಯಕಿ ಕಲ್ಪಾನಾ ರಾಘವೇದ್ರ ಅವರು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ಇಂದು ಬೆಳಗ್ಗೆಯಿಂದಲೇ ಸಖತ್ ಸದ್ದು ಮಾಡಿತ್ತು. ಹಲವು ಸೂಪರ್ ಹಿಟ್ ಹಾಡುಗಳಿಗೆ ಧ್ವನಿಯಾದ ಕಲ್ಪನಾ ಆತ್ಮಹತ್ಯೆ ಮಾಡಿಕೊಳ್ಳುವ ಕೆಲಸಕ್ಕೆ ಕೈ ಹಾಕಿದರ ಎಂದು ಸಾಕಷ್ಟು ಮಂದಿ ಪ್ರಶ್ನೆ ಮಾಡಿದ್ದರು. ಇದೀಗ ಈ ಬಗ್ಗೆ ಕಲ್ಪನಾ ಮಗಳು ಸ್ಪಷ್ಟನೆ ನೀಡಿದ್ದಾರೆ.
‘ನನ್ನ ತಾಯಿಗೆ ಯಾವುದೇ ಸಮಸ್ಯೆ ಇಲ್ಲ. ಅವರು ಆರೋಗ್ಯವಾಗಿದ್ದಾರೆ. ಅವರು ಎಲ್ಎಲ್ಬಿ ಹಾಗೂ ಪಿಎಚ್ಡಿ ಮಾಡುತ್ತಿದ್ದಾರೆ. ಅವರಿಗೆ ನಿದ್ರಾಹೀನತೆ ಇದೆ. ಅವರು ನಿದ್ರೆಮಾತ್ರೆ ತೆಗೆದುಕೊಂಡಿದ್ದಾರೆ. ಇದು ಓವರ್ಡೋಸ್ ಆಗಿದೆ. ಇದು ಆತ್ಮಹತ್ಯೆ ಪ್ರಯತ್ನವಲ್ಲ’ ಎಂದು ಕಲ್ಪನಾ ಮಗಳು ಸ್ಪಷ್ಟನೆ ನೀಡಿದ್ದಾರೆ.
‘ನಮಗೆ ಅವರ ಬಗ್ಗೆ ಖುಷಿ ಇದೆ. ನಡೆದ ಘಟನೆಯನ್ನು ತಿರುಚಬೇಡಿ. ಇದು ಡ್ರಗ್ (ಔಷಧ) ಓವರ್ಡೋಸ್ ಆಗಿದೆ ಅಷ್ಟೇ’ ಎಂದು ಹೇಳುವ ಮೂಲಕ ಎಲ್ಲಾ ವಂದತಿಗಳನ್ನು ತಳ್ಳಿ ಹಾಕಿದ್ದಾರೆ. ಕಲ್ಪನಾ ಅವರು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.
ನಿನ್ನೆ ಅಂದರೆ ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕಲ್ಪನಾ ನಿದ್ರೆ ಮಾತ್ರೆ ಸೇವಿಸಿದ್ದಾರೆ. ಸಂಜೆ ಅವರ ಪತಿ ಕರೆ ಮಾಡಿದರೂ ಕರೆ ಸ್ವೀಕರಿಸಿಲ್ಲ. ಆ ಬಳಿಕ ಕಲ್ಪನಾ ಪತಿ ಪರಿಚಯಸ್ಥರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಪರಿಚಯಸ್ಥರು ಮನೆ ಬಾಗಿಲು ತಟ್ಟಿದರೂ ಅವರು ತೆಗೆದಿಲ್ಲ. ನಂತರ ಬಾಗಿಲು ಒಡೆದು ಒಳ ಹೋದಾಗ ಕಲ್ಪನಾ ಪ್ರಜ್ಞಾ ಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಸದ್ಯ ಕಲ್ಪನಾ ಚೇತರಿಸಿಕೊಳ್ಳುತ್ತಿದ್ದಾರೆ.