ಹಾಸನ: ಹೆರಿಗೆ ಬಳಿಕ ಬಾಣಂತಿಯೊಬ್ಬರು ಸಾವನ್ನಪ್ಪಿರುವ ಘಟನೆ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಶೃತಿ (30) ಎಂಬ ಮಹಿಳೆ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ಕೆಲವೇ ಗಂಟೆಗಳಲ್ಲಿ ಅವರ ಆರೋಗ್ಯ ಹಠಾತ್ ಬಿಗಡಾಯಿಸಿ ಮೃತಪಟ್ಟಿದ್ದಾರೆ.
ಶನಿವಾರ ಮಧ್ಯರಾತ್ರಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಶೃತಿಯನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆತಂದಿದ್ದರು. ಭಾನುವಾರ ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಹೆರಿಗೆ ಯಶಸ್ವಿಯಾಗಿ ನಡೆದಿತ್ತು. ಆದರೆ ನಂತರ ಶೃತಿ ಕೋಮಾಗೆ ಜಾರಿದ್ದು, ಪರಿಸ್ಥಿತಿ ಗಂಭೀರವಾಗುತ್ತಿದೆ ಎಂದು ವೈದ್ಯರು ತಿಳಿಸಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ. ಪತಿ ಪುನೀತ್ ಅವರು ತಕ್ಷಣ ಕರೆದೊಯ್ದರೂ, ಮಾರ್ಗ ಮಧ್ಯೆ ಶೃತಿ ಕೊನೆಯುಸಿರೆಳೆದಿದ್ದಾರೆ.
ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದ ಶೃತಿಗೆ ಈಗಾಗಲೇ ಐದು ವರ್ಷದ ಗಂಡು ಮಗು ಇದೆ. ಹೆಣ್ಣು ಮಗು ಜನಿಸಿದ್ದ ಸಂತಸ ಕ್ಷಣದಲ್ಲೇ ದುಃಖವಾಗಿ ಬದಲಾಗಿದೆ. ಕುಟುಂಬಸ್ಥರು ಹಾಗೂ ಸಂಬಂಧಿಕರು ಆಸ್ಪತ್ರೆ ಮುಂದೆ ಆಕ್ರೋಶ ವ್ಯಕ್ತಪಡಿಸಿ, “ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಿಲ್ಲ, ನಿರ್ಲಕ್ಷ್ಯದಿಂದ ವರ್ತಿಸಿದ್ದಾರೆ” ಎಂದು ಆರೋಪಿಸಿದ್ದಾರೆ. ವೈದ್ಯರಾದ ಸುಮಾ ಹೆರಿಗೆ ಮಾಡಿಸಿ, ದಿಢೀರ್ ರಕ್ತ ಬೇಕೆಂದು ತಿಳಿಸಿದರು. ಎಲ್ಲ ವ್ಯವಸ್ಥೆ ಮಾಡಿದರೂ ತಡವಾಗಿ ಕ್ರಮ ಕೈಗೊಂಡರು ಎಂದು ಪತಿ ದೂರಿದ್ದಾರೆ.
ಆದರೆ ಆಸ್ಪತ್ರೆ ಆಡಳಿತ ಮಂಡಳಿ ಆರೋಪವನ್ನು ತಳ್ಳಿಹಾಕಿದೆ. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಹಿಮ್ಸ್ ಶಸ್ತ್ರ ಚಿಕಿತ್ಸಕರು, “ರಾತ್ರಿ ವೇಳೆ ಬಂದರೂ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಯಾವುದೇ ನಿರ್ಲಕ್ಷ್ಯ ನಡೆದಿಲ್ಲ. ಮಹಿಳೆಗೆ ಹಠಾತ್ ಹೃದಯ ಸ್ಥಂಭನ ಉಂಟಾಗಿ ಕೋಮಾಗೆ ಜಾರಿದ್ದಾರೆ. ಮಗು ನಮ್ಮ ಐಸಿಯುನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿ, ಕರುಳ ಬಳ್ಳಿಯನ್ನು ಕಣ್ತುಂಬಿಕೊಳ್ಳುವ ಮೊದಲೇ ತಾಯಿ ಸಾವನ್ನಪ್ಪಿರುವುದು ಕುಟುಂಬಕ್ಕೂ, ಗ್ರಾಮಕ್ಕೂ ದುಃಖದ ಸಂಗತಿಯಾಗಿದೆ.



