ತುಮಕೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಒಂದಾಗಿದೆ. ಈ ಯೋಜನೆಯಡಿ ಪ್ರತಿ ಮನೆಯ ಯಜಮಾನಿಗೂ 2,000 ರೂಪಾಯಿ ನೀಡಲಾಗುತ್ತಿದ್ದು,
ಇದರಿಂದ ಮನೆ ಖರ್ಚುಗಳನ್ನು ನಿಭಾಯಿಸುತ್ತಿದ್ದಾರೆ. ಇತ್ತೀಚೆಗೆ ಗೃಹಲಕ್ಷ್ಮಿ ಯೋಜನೆಯ ಹಣದಿಂದಾಗಿ ಮಹಿಳೆಯೊಬ್ಬರು ಊರಿಗೆ ಹೋಳಿಗೆ ಊಟ ಬಡಿಸುವ ಮೂಲಕ ರಾಜ್ಯದ ಗಮನಸೆಳೆದಿದ್ದರು.
ಇದೀಗ ತಾಯಿಯೊಬ್ಬರು ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಲ್ಲಿ ಮಗಳಿಗೆ ಕಂಪ್ಯೂಟರ್ ಕೊಡಿಸಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ಗಾಂಧಿ ನಗರದ ಕೆರಗೋಡಿಯಲ್ಲಿ ನಡೆದಿದೆ.
ನಗರದ ಕೆರಗೋಡಿ ವಾಸಿಗಳಾದ ಸಾಧಿಕ್ ಹಾಗೂ ನಗ್ಮ ದಂಪತಿ ತಮ್ಮ ಪುತ್ರಿ ಸೈದಾ ಆಫೀಫಾಗೆ ಓದಲು ಅನುಕೂಲ ಆಗಲೆಂದು ಗೃಹಲಕ್ಷ್ಮೀ ಹಣವನ್ನು ಕೂಡಿಟ್ಟು ಕಂಪ್ಯೂಟರ್ ಕೊಡಿಸಿದ್ದಾರೆ. ಗೃಹಲಕ್ಷ್ಮಿ ಹಣದ ಜೊತೆಗೆ ಸ್ಕಾಲರ್ ಶಿಪ್ ಹಣ ಕೂಡ ಸೇರಿಸಿ ಕಂಪ್ಯೂಟರ್ ಖರೀದಿ ಮಾಡಿದ್ದಾರೆ. ಪೋಷಕರ ಗೃಹಲಕ್ಷ್ಮಿ ಹಣದ ಸದ್ಭಳಕೆ ಇತರೆ ಪೋಷಕರಿಗೆ ಪ್ರೇರಣೆಯಾಗಿದೆ.