ಕಲಬುರಗಿ: ದೇವರ ಹುಂಡಿಯ ಎಣಿಕೆ ಸಂದರ್ಭದಲ್ಲಿ ಭಕ್ತರು ದೇವರ ಮುಂದೆ ತೋಡಿಕೊಂಡ ಬಗೆಬಗೆಯ ಬೇಡಿಕೆಗಳು ಗಮನ ಸೆಳೆಯುತ್ತವೆ. ದೇವರ ಹುಂಡಿಗೆ ಹಣದ ಜತೆಗೆ ಚೀಟಿಗಳನ್ನು ಬರೆದು ಹಾಕುತ್ತಾರೆ.
ತಮ್ಮ ಬಯಕೆಯ ಈಡೇರಿಕೆಗಾಗಿ ಪ್ರಾರ್ಥನೆ ಮಾಡುತ್ತಾರೆ. ಕೆಲವರು ಪ್ರೀತಿ ಫಲಿಸಲಿ ಎಂದು ದೇವರ ಮೊರೆ ಹೋದರೆ, ಇನ್ನು ಕೆಲವರು ತಮ್ಮ ಮನೆಯವರು, ಮಕ್ಕಳು ಚೆನ್ನಾಗಿರಲಿ ಎಂದು ಕೋರುತ್ತಾರೆ. ಆಸ್ತಿ, ಪಾಸ್ತಿ, ಕಾರುಗಳಿಗೆ ಬೇಡಿಕೆ ಇಡುವವರು ಇನ್ನೂ ತುಂಬಾ ಜನ. ರಾಜಕೀಯ ಆಸಕ್ತರು ತಮ್ಮ ಇಷ್ಟದ ನಾಯಕ, ಪಕ್ಷದ ಪರವಾಗಿ ದೇವರಲ್ಲಿ ಕೋರಿಕೆ ಸಲ್ಲಿಸುತ್ತಾರೆ.
ಇಲ್ಲೊಬ್ಬ ಮಹಿಳೆ ತನ್ನ ಅತ್ತೆ ಆದಷ್ಟು ಬೇಗ ಸಾಯಬೇಕು ಎಂಬ ಬೇಡಿಕೆ ಮಂಡಿಸಿದ್ದಾಳೆ. ಹೌದು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಘತ್ತರಗಿ ಗ್ರಾಮದ ಭಾಗ್ಯವಂತಿ ದೇವಿಯ ಹುಂಡಿಗೆ 20 ರೂ. ನೋಟು ಹಾಕಲಾಗಿದೆ. ‘‘ತಾಯಿ ನಮ್ಮ ಅತ್ತೆ ಬೇಗ ಸಾಯಬೇಕು’’ ತಾಯಿ ಅಂತಾ 20 ರೂ ನೋಟ್ ಮೇಲೆ ಬರೆದು ಸೊಸೆ ಕಾಣಿಕೆ ಹುಂಡಿಗೆ ಹಾಕಿದ್ದಾಳೆ.
ಭಾಗ್ಯವಂತಿ ದೇವಿಯ ಹುಂಡಿ ಎಣಿಕೆ ಮಾಡುವ ವೇಳೆ ಅತ್ತೆ ಸಾಯಲೆಂದು ಬರೆದ ಈ ನೋಟ್ ಪತ್ತೆಯಾಗಿದೆ. ಪ್ರತಿ ವರ್ಷ ಕಾಣಿಕೆ ಹುಂಡಿ ತೆರೆದು ಭಕ್ತರ ಕಾಣಿಕೆಯ ಎಣಿಕೆ ಮಾಡಲಾಗುತ್ತದೆ. ಈ ವೇಳೆ 60 ಲಕ್ಷ ನಗದು ಒಂದು ಕೆಜಿ ಬೆಳ್ಳಿ , 200 ಚಿನ್ನಾಭರಣ , ಹುಂಡಿಯಲ್ಲಿ ಜಮಾ ಆಗಿದೆ.