ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನಿಮ್ಮ ಮಕ್ಕಳು ಶಾಲೆಯಲ್ಲಿ ಎಷ್ಟು ಹೊತ್ತು ಇರುತ್ತಾರೋ ಅದಕ್ಕಿಂತಲೂ ಹೆಚ್ಚಿನ ಸಮಯವನ್ನು ಅವರು ಮನೆಯಲ್ಲಿ ಕಳೆಯುತ್ತಾರೆ. ಅವರು ಮನೆಯಲ್ಲಿ ಏನು ಮಾಡುತ್ತಾರೆ ಎಂಬುದರ ಮೇಲೆ ನಿಮ್ಮ ನಿಗಾ ಇರಬೇಕು. ನಿಮ್ಮ ಮಕ್ಕಳ ಕಲಿಕೆಯಲ್ಲಿ ನಿಮ್ಮ ಪಾತ್ರ ಮಹತ್ವದ್ದಿದೆ ಎಂದು ಮುಖ್ಯ ಶಿಕ್ಷಕಿ ವಿ.ಎಸ್. ಚಲವಾದಿ ಹೇಳಿದರು.
ಸಮೀಪದ ಕೋಟುಮಚಗಿ ಗ್ರಾಮದ ಶ್ರೀ ಸೋಮೇಶ್ವರ ಪ್ರೌಢಶಾಲೆಯಲ್ಲಿ ಜರುಗಿದ ತಾಯಂದಿರ ಸಭೆಯಲ್ಲಿ ಅವರು ಮಾತನಾಡಿದರು.
ಪ್ರತಿ ವಿದ್ಯಾರ್ಥಿಯ ಜೀವನದಲ್ಲಿ 10ನೇ ತರಗತಿ ಮಹತ್ವದ್ದಾಗಿದೆ. ವಾರ್ಷಿಕ ಪರೀಕ್ಷೆಗಳು ಹತ್ತಿರವಾಗುತ್ತಿರುವ ಈ ದಿನಗಳಲ್ಲಿ ನೀವು ನಿಮ್ಮ ಮಕ್ಕಳ ಶಿಕ್ಷಣ ಪ್ರಗತಿಯ ಬಗ್ಗೆ ಗಮನ ನೀಡಬೇಕು. ಶಾಲೆಯಲ್ಲಿ ನಡೆಯುವ ವಿಶೇಷ ವರ್ಗಗಳಿಗೆ ನಿಮ್ಮ ಮಕ್ಕಳು ಕಡ್ಡಾಯವಾಗಿ ಹಾಜರಿರುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಿಮ್ಮ ಮೇಲಿದೆ. ಆದ್ದರಿಂದ ನೀವು ನಿಮ್ಮ ಮಕ್ಕಳಿಗಿಂತ ಹೆಚ್ಚು ಜಾಗರೂಕರಾಗಿದ್ದು, ಅವರ ವಿದ್ಯಾಭ್ಯಾಸದಲ್ಲಿ ನಿಮ್ಮದೇ ಆದ ಪಾತ್ರವನ್ನು ವಹಿಸಬೇಕಿದೆ ಎಂದು ತಿಳಿಸಿದರು.
ಪಾಲಕರ ಪ್ರತಿನಿಧಿ ಸಿ.ವಿ. ಗೊಡಚಪ್ಪನವರ ಮತ್ತು ಆರ್.ಆರ್. ದಂಡಿನಮಠ ವೇದಿಕೆಯ ಮೇಲಿದ್ದರು. ಟಿ.ಜಿ. ಕಂಬಾಳಿಮಠ ಸ್ವಾಗತಿಸಿದರು. ಶಿಕ್ಷಕಿ ಆರ್.ಡಿ. ಜಗ್ಗಲ ನಿರೂಪಿಸಿದರು. ಆರ್.ಎಸ್. ನೀರಲಗಿ ವಂದಿಸಿದರು.