ವಿಜಯಸಾಕ್ಷಿ ಸುದ್ದಿ, ಗದಗ: ಅಪೌಷ್ಠಿಕತೆಯನ್ನು ನಾವು ಹೋಗಲಾಡಿಸಬೇಕು. ಇಂದಿನ ದಿನಗಳಲ್ಲಿ ಆರೋಗ್ಯ ಎನ್ನುವುದು ಅತ್ಯಂತ ಪ್ರಮುಖವಾದದ್ದು. ಮೊಳಕೆ ಕಟ್ಟಿದ ಕಾಳುಗಳನ್ನು ಸೇವಿಸಿ. ತಾಯಂದಿರು ಮಕ್ಕಳನ್ನು ಪ್ರೀತಿಯಿಂದ ಕಾಣಬೇಕು ಎಂದು ಡಾ. ವೀರೇಶ ಸತ್ತಿಗೇರಿ ಹೇಳಿದರು.
ರೋಣ ತಾಲೂಕಿನ ಸಂದಿಗವಾಡ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ ಟ್ರಸ್ಟ್ ಸಹಯೋಗದಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಪೌಷ್ಠಿಕ ಆಹಾರ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಊಟದ ಸಮಯದಲ್ಲಿ ತರಕಾರಿಗಳನ್ನು ತಿನ್ನಬೇಕು. ಇದರ ಕುರಿತು ತಾಯಂದಿರು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು. ನಾವು ತಿನ್ನುವ ಆಹಾರ ಎಷ್ಟು ಪೌಷ್ಠಿಕವಾಗಿದೆ ಅಥವಾ ನಮ್ಮ ಮಕ್ಕಳಿಗೆ ತಿನ್ನಲು ಕೊಡಿಸುತ್ತಿರುವ ತಿನಿಸು ಅವರ ಆರೋಗ್ಯಕ್ಕೆ ಪೂರಕವೇ ಎಂಬ ಬಗ್ಗೆ ಒಮ್ಮೆ ಕೂಡ ನಾವು ಯೋಚಿಸುವುದಿಲ್ಲ. ಹಾಗೆಯೇ ನಮ್ಮ ಆಹಾರ ಪದ್ಧತಿಯಿಂದ ನಮ್ಮ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ನಾವು ಸಾರಾಸಗಟಾಗಿ ನಿರ್ಲಕ್ಷಿಸಿದ್ದೇವೆ ಎಂದರು.
ಅಪೌಷ್ಠಿಕತೆಗೆ ಪ್ರಮುಖ ಕಾರಣ ನಮ್ಮ ಆಹಾರ ಪದ್ಧತಿ. ಸಮಯದ ಅಭಾವದ ನೆಪ ಹೇಳಿ ಎಲ್ಲೆಂದರಲ್ಲಿ, ಕೈಗೆ ಸಿಕ್ಕಿದ್ದು, ಕಣ್ಣಿಗೆ ಕಂಡದ್ದನ್ನು ತಿನ್ನುವ ನಮ್ಮ ಈಗಿನ ಅಭ್ಯಾಸವೇ ಭವಿಷ್ಯದಲ್ಲಿ ನಮಗೆ ಮಾರಕ. ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ, ಆಹಾರ ಬೆಳೆಗಳಿಗೆ ಹೆಚ್ಚು ರಾಸಾಯನಿಕ ಬಳಸುವುದು, ಪ್ರಸ್ತುತ ಹಣ್ಣು, ತರಕಾರಿ ಸಂಸ್ಕರಣೆಗೆ ಬಳಸುವ ವಿಧಾನ ನಮ್ಮ ಆರೋಗ್ಯಕ್ಕೆ ಮಾರಕ. ಜತೆಗೆ ಈಗಿನ ಹೈಬ್ರಿಡ್ ಬೆಳೆಗಳಲ್ಲಿ ಪೌಷ್ಟಿಕಾಂಶ ಕಡಿಮೆ. ಯುವ ಪೀಳಿಗೆ ಹೆಚ್ಚಾಗಿ ಸಿದ್ಧ ಆಹಾರಕ್ಕೆ ಮಾರುಹೋಗಿರುವುದು ಅಪೌಷ್ಠಿಕತೆಗೆ ಕಾರಣವಾಗಿದೆ ಎಂದರು.
ತಾಲೂಕಾ ಯೋಜನಾಧಿಕಾರಿ ಮಹಾಬಲೇಶ್ವರ ಪಟಗಾರ ಮಾತನಾಡಿ, ಹಸಿವಾದಾಗ ಮಾತ್ರ ಆಹಾರ ಸೇವಿಸಿ. ಆದರೆ ಅತಿಯಾಗಿ ತಿನ್ನಬೇಡಿ, ಹಸಿವು ತೀರಲು ಎಷ್ಟು ಬೇಕೋ ಅಷ್ಟು ಸತ್ವಯುತ ಆಹಾರ ಸೇವಿಸಬೇಕು. ನಮ್ಮ ದೇಹಕ್ಕೆ ಹೆಚ್ಚು ಮಾರಕವಾಗಿರುವ ಪದಾರ್ಥಗಳಲ್ಲಿ ಸಕ್ಕರೆ ಕೂಡ ಒಂದು. ಕೆಲವರಿಗೆ ಶಕ್ತಿ ನೀಡುವ ಸಕ್ಕರೆ, ದೇಹದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ಕುಗ್ಗಿಸುತ್ತದೆ. ಪರಿಣಾಮ ಆಯಾಸ ಮತ್ತು ಮೆದುಳಿನ ತೊಂದರೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಸಕ್ಕರೆಯ ಬಳಕೆ ತಗ್ಗಿಸಿ. ಸಂಸ್ಕರಿಸಿದ ಆಹಾರ ಮತ್ತು ಹೆಚ್ಚು ಸಕ್ಕರೆ ಬಳಸಿ ಮಾಡಿದ ತಿನಿಸುಗಳು ನಮ್ಮ ಜೀವರಾಸಾಯನಿಕ ಕ್ರಿಯೆಗೆ ಹಾನಿಯುಂಟುಮಾಡುತ್ತವೆ. ಹೀಗಾಗಿ ನೈಸರ್ಗಿಕವಾಗಿ ಸಿಗುವ ಹಣ್ಣು, ಸೊಪ್ಪು, ತರಕಾರಿ ತಿನ್ನುವುದು ಉತ್ತಮವಾಗಿದೆ ಎಂದರು.
ಗ್ರಾ.ಪಂ ಸದಸ್ಯೆ ಬಸಮ್ಮ ಟೆಕ್ಕೆದ, ಒಕ್ಕೂಟ ಅಧ್ಯಕ್ಷ ಬಸಮ್ಮ ಪಾಟೀಲ, ಜಿಲ್ಲಾ ರೈತ ಸಂಘದ ಗೌರವ ಕಾರ್ಯದರ್ಶಿ ಮಹದೇವಗೌಡ ಪಾಟೀಲ, ಶಿವನಗೌಡ ಪಾಟೀಲ, ತಿಪ್ಪನಗೌಡ ಹುಲ್ಲೂರ, ಗ್ರಾಮಸ್ಥರು ಇದ್ದರು.
ವಲಯದ ಮೇಲ್ವಿಚಾರಕ ಖಾದರ್‌ಸಾಬ್ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಸುಮಿತ್ರಾ ಪ್ರಾರ್ಥಿಸಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಲಕ್ಷ್ಮೀ ನಿರೂಪಿಸಿದರು.
ಜಿಲ್ಲಾ ನಿರ್ದೇಶಕ ಕೇಶವ್ ದೇವಾಂಗ ಮಾತನಡಿ, ಯೋಜನೆಯ ಉದ್ದೇಶ ಮತ್ತು ರೂಪುರೇಷೆಗಳ ಬಗ್ಗೆ, ಸ್ವಾವಲಂಬನೆಯ ಉದ್ಯೋಗ ಮಾಡುವ ಬಗ್ಗೆ ಮಾಹಿತಿ ನೀಡಿದರು. ಜ್ಞಾನ ವಿಕಾಸ ಕೇಂದ್ರದಲ್ಲಿ ಪ್ರತಿ ತಿಂಗಳು ಸದ್ಯಸರಿಗೆ ಶಿಕ್ಷಣ, ಕಾನೂನಿನ ಅರಿವು, ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಮಾಹಿತಿಯನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.



