ಬೆಂಗಳೂರು:- ಇಂದು ಮತ್ತು ನಾಳೆ ಬೆಂಗಳೂರಿನ ಆಡುಗೋಡಿಯಲ್ಲಿ ರಥಸಪ್ತಮಿ ಜಾತ್ರೆ ನಡೆಯುವ ಹಿನ್ನೆಲೆ, ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಈ ಸಂಬಂಧ ಸಾಮಾಜಿಕ ಜಾಲತಾಣದ ಮೂಲಕ ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಮಂಗಳವಾರ ಅಂದ್ರೆ ಇಂದು ರಾತ್ರಿ 7 ಗಂಟೆಯಿಂದ ನಾಳೆ ಬೆಳಿಗ್ಗೆ 09.00 ಗಂಟೆಯವರೆಗೆ ಆಡುಗೋಡಿ ಮುಖ್ಯ ರಸ್ತೆಯಲ್ಲಿ ರಥ ಸಪ್ತಮಿ ಜಾತ್ರಾ ಮಹೋತ್ಸವ ಹಾಗೂ ವಿವಿಧ ದೇವರುಗಳ ಸುಮಾರು 32 ಕ್ಕೂ ಹೆಚ್ಚು ಪಲ್ಲಕ್ಕಿಗಳ ಮೆರವಣಿಗೆ ನಡೆಯುತ್ತವೆ. ಈ ರಥಸಮಪ್ತಮಿ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಾರೆ. ಹೀಗಾಗಿ, ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ ತಾತ್ಕಾಲಿಕವಾಗಿ ಸಂಚಾರ ನಿರ್ಬಂಧಿಸಲಾಗಿದೆ.
ಸಂಚಾರ ನಿರ್ಬಂಧ:
* ರಥಸಪ್ತಮಿ ಜಾತ್ರಾ ಮಹೋತ್ಸವ ನಡೆಯುವ ಆಡುಗೋಡಿ ಮುಖ್ಯ ರಸ್ತೆಯಲ್ಲಿ ಆನೇಪಾಳ್ಯ ಜಂಕ್ಷನ್‌ನಿಂದ ಯುಕೋ ಬ್ಯಾಂಕ್ ಜಂಕ್ಷನ್‌ವರೆಗೆ ಎರಡು ಬದಿಯಲ್ಲಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
* ಆಡುಗೋಡಿ ಜಂಕ್ಷನ್‌ಗೆ ಸಂಪರ್ಕ ಕಲ್ಪಿಸುವ ಅಡ್ಡ ರಸ್ತೆಗಳಾದ ನ್ಯೂ ಮೈಕೋ ಲಿಂಕ್ ರಸ್ತೆ ಮತ್ತು ಬಜಾರ್ ಸ್ಟ್ರೀಟ್ ರಸ್ತೆಗಳಲ್ಲಿಯೂ ಸಹ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗ:
* ಯುಕೋ ಬ್ಯಾಂಕ್ ಜಂಕ್ಷನ್ ಕಡೆಯಿಂದ ಆನೇಪಾಳ್ಯ ಮತ್ತು ಎಂ.ಜಿ ರಸ್ತೆಗೆ ಸಾಗುವ ವಾಹನಗಳು, ಯುಕೋ ಬ್ಯಾಂಕ್ ಜಂಕ್ಷನ್‌ನಲ್ಲಿ ಬಲತಿರುವು ಪಡೆದು, ಎನ್.ಜಿ.ವಿ ಬ್ಯಾಕ್ ಗೇಟ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಪಾಸ್‌ಪೋಟ್ ಆಫೀಸ್ ಬಳಿ ಬಲತಿರುವು ಪಡೆದು ಬುಚರಿ ಜಂಕ್ಷನ್ ಮುಖಾಂತರ ಅನೇಪಾಳ್ಯ ಮತ್ತು ಎಂ.ಜಿ ರಸ್ತೆಯ ಕಡೆಗೆ ಸಾಗಬಹುದು.
- ಆನೇಪಾಳ್ಯ ಜಂಕ್ಷನ್ ಕಡೆಯಿಂದ ಮಡಿವಾಳ ಚೆಕ್‌ಪೋಸ್ಟ್ ಹಾಗೂ ಹೊಸೂರು ರಸ್ತೆ ಕಡೆಗೆ ಸಾಗುವ ವಾಹನಗಳು ಅನೇಪಾಳ್ಯ ಜಂಕ್ಷನ್‌ನಲ್ಲಿ ಬಲತಿರುವು ಪಡೆದು, ಬಿ.ಜಿ ರಸ್ತೆಯ ಮುಖಾಂತರ ಸಾಗಿ ಡೈರಿ ಸರ್ಕಲ್ ಸರ್ವಿಸ್ ರಸ್ತೆಯಲ್ಲಿ ಸಾಗಿ ಡೈರಿ ಸರ್ಕಲ್ ಜಂಕ್ಷನ್‌ನಲ್ಲಿ ಎಡತಿರುವು ಪಡೆದು ಡಾ. ಮರಿಗೌಡ ರಸ್ತೆಯ ಮುಖಾಂತರ ಮಡಿವಾಳ ಚೆಕ್‌ಪೋಸ್ಟ್ ಮತ್ತು ಹೊಸೂರು ರಸ್ತೆಗೆ ತಲುಪಿ ಮುಂದೆ ಸಾಗಬಹುದು.
- ಲಕ್ಕಸಂದ್ರ ಮೆಟ್ರೋ ಕಾಮಗಾರಿ ಸಂಬಂಧ ಬಿ.ಜಿ ರಸ್ತೆ ಚೆನ್ನಯ್ಯನ ಪಾಳ್ಯ ಕ್ರಾಸ್‌ನಿಂದ ಆನೇಪಾಳ್ಯ ಜಂಕ್ಷನ್‌ವರೆಗೆ ಸಂಚಾರವನ್ನು ನಿರ್ಬಂಧಿಸಿ ಅಧಿಸೂಚನೆ ಹೊರಡಿಸಿದ್ದು, ರಥ ಸಪ್ತಮಿ ಜಾತ್ರಾ ಮಹೋತ್ಸವ ಸಂಬಂಧ ಮೈಕೋಬಂಡೆ ಜಂಕ್ಷನ್‌ನಿಂದ ಆಡುಗೋಡಿ ಜಂಕ್ಷನ್‌ವರೆಗೆ ಮೈಕೋ ಲಿಂಕ್ ರಸ್ತೆಯ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿರುವುದರಿಂದ ಡೈರಿ ಸರ್ಕಲ್ ಕಡೆಯಿಂದ ಅನೇಪಾಳ್ಯ ಹಾಗೂ ಎಂ.ಜಿ ರಸ್ತೆಯ ಕಡೆಗೆ ಸಾಗುವ ವಾಹನಗಳು ಮೈಕೋ ಬಂಡೆ ಜಂಕ್ಷನ್‌ನಿಂದ ಬಿ.ಜಿ ರಸ್ತೆಯಲ್ಲಿಯೇ ಸ್ವಲ್ಪ ಮುಂದೆ ಸಾಗಿ ಚೆನ್ನಯ್ಯನ ಪಾಳ್ಯ ಕ್ರಾಸ್ನಲ್ಲಿ ಎಡತಿರುವು ಪಡೆದು ವಿಲ್ಸನ್ ಗಾರ್ಡನ್ 10ನೇ ಕ್ರಾಸ್ ಕಡೆಗೆ ಸಂಚರಿಸಿ ಕೆ.ಹೆಚ್. ರಸ್ತೆಯ ಮೂಲಕ ಮುಂದೆ ಸಾಗಬಹುದು.
- ಡೈರಿ ಸರ್ಕಲ್ ಜಂಕ್ಷನ್‌ನಲ್ಲಿ ಭಾರಿ ಗಾತ್ರದ ವಾಹನಗಳು ಹಾಗೂ ಬಸ್ಸುಗಳ ಸಂಚಾರವನ್ನು ಮೈಕೋಬಂಡೆ ಜಂಕ್ಷನ್, ಚಿನ್ನಯ್ಯನಪಾಳ್ಯ ಕ್ರಾಸ್ ಕಡೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಿದ್ದು, ಸದರಿ ವಾಹನಗಳು ನಿಮ್ಹಾನ್ಸ್, ವಿಲ್ಸನ್ ಗಾರ್ಡನ್ 10ನೇ ಕ್ರಾಸ್ ಮುಖಾಂತರ ಸಾಗಬಹುದು.
- ಮಡಿವಾಳ ಚೆಕ್ ಪೋಸ್ಟ್ ಕಡೆಯಿಂದ ಯುಕೋ ಬ್ಯಾಂಕ್ ಜಂಕ್ಷನ್ ಕಡೆಗೆ ಭಾರಿ ಗಾತ್ರದ ವಾಹನಗಳು ಹಾಗೂ ಬಸ್ಸುಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದ್ದು, ವಾಹನಗಳು ಡಾ|ಮರೀಗೌಡ ರಸ್ತೆ-ಡೈರಿಸರ್ಕಲ್-ನಿಮ್ಹಾನ್ಸ್-ವಿಲ್ಸನ್ ಗಾರ್ಡನ್ 10ನೇ ಕ್ರಾಸ್ ಮುಖಾಂತರ ಸಾಗಬಹುದು.