ಬೆಂಗಳೂರು: ದೇವನಹಳ್ಳಿ ತಾಲೂಕಿನ ಚನ್ನಾರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ತಲೆಯೆತ್ತುವುದನ್ನು ವಿರೋಧಿಸಿ ಚಳುವಳಿ ನಡೆಸುತ್ತಿರುವ ರೈತಮುಖಂಡರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಭೆ ನಡೆಸಿದರು. ರೈತರ ಸಭೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ,
ದೇವನಹಳ್ಳಿ, ಚನ್ನರಾಯಪಟ್ಟಣ ಹೋರಾಟಗಾರರ ಸಭೆ ಕರೆದಿದ್ದೆ. ಅನೇಕ ರೈತಪರ ಹೋರಾಟಗಾರರು ಭಾಗವಹಿಸಿದ್ರು. ಭೂಸ್ವಾಧೀನ ಸಂಬಂಧ ಫೈನಲ್ ನೋಟಿಫಿಕೇಷನ್ ಆಗಿಬಿಟ್ಟಿದೆ. ಆದ್ದರಿಂದ ಲೀಗಲ್ ಇಶ್ಯೂಸ್ ಇದೆ, ಸಮಯ ಬೇಕು ಅಂತ ಹೇಳಿದ್ದೇನೆ. ಸರ್ಕಾರಕ್ಕೆ ಹತ್ತು ದಿನ ಸಮಯ ಬೇಕು ಅಂತ ಹೇಳಿದ್ದೇನೆ. ಜು.15ನೇ ತಾರೀಖು ಬೆಳಗ್ಗೆ ರೈತರ ಜೊತೆ ಮತ್ತೆ ಸಭೆ ನಡೆಸಲಾಗುವುದು ಎಂದರು.
ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವುದಕ್ಕೆ ಸಂಬಂಧಿಸಿದಂತೆ ಕೆಲವು ಕಾನೂನು ತೊಡಕುಗಳಿದ್ದು, ಅದನ್ನು ಸರಿಪಡಿಸಿಕೊಳ್ಳುವ ಸಲಹೆಯನ್ನು ಕಾನೂನು ತಜ್ಞರು ನೀಡಿದ್ದಾರೆ.
ಈಗಾಗಲೇ ಏಪ್ರಿಲ್ ತಿಂಗಳಲ್ಲಿ ಅಂತಿಮ ನೋಟಿಫಿಕೇಶನ್ ಆಗಿರುವ ಕಾರಣ ಅದರ ಸಾಧಕ–ಬಾಧಕಗಳ ಕುರಿತು ಚರ್ಚೆ ನಡೆಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ 10 ದಿನಗಳ ಕಾಲಾವಕಾಶ ಅಗತ್ಯವಿದೆ. ಈ ಕಾಲಾವಧಿಯಲ್ಲಿ ಸರ್ಕಾರಕ್ಕೆ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಿದೆ ಎಂದು ತಿಳಿಸಿದರು.