ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಬುಧವಾರ ದೆಹಲಿಯಲ್ಲಿ ಕೇಂದ್ರ ಭೂ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿನ ಕಾರವಾರ, ಹಾವೇರಿ, ಗದಗ, ಬಾಗಲಕೋಟ ಜಿಲ್ಲೆ ಸಂಪರ್ಕಿಸುವ ಕಾರವಾರ-ಇಳಕಲ್ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸುವಂತೆ ಮತ್ತು ಗಜೇಂದ್ರಗಡ-ರೋಣ ಹಾಗೂ ಗದಗ ರಿಂಗ್ ರೋಡ್ ಯೋಜನೆಗಳ ಜಾರಿಗೆ ಅನುಮೋದನೆ ಕೋರಿ ಮನವಿ ಸಲ್ಲಿಸಿದರು. ಸಂಸದ ಡಾ. ಕೆ. ಸುಧಾಕರ್ ಇದ್ದರು.
ಕಾರವಾರದಿಂದ ಹಾವೇರಿ-ಗದಗ ಜಿಲ್ಲೆಯಲ್ಲಿ ಹಾದು ಹೋಗಿರುವ ಕೈಗಾ-ಇಳಕಲ್ ರಾಜ್ಯ ಹೆದ್ದಾರಿ 4 ಸಂಸದರ ಕ್ಷೇತ್ರಕ್ಕೆ ಸಂಬಂಧಿಸಿದೆ. ಹೀಗಿದ್ದರೂ ರಸ್ತೆ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ. ಈ ರಾಷ್ಟ್ರೀಯ ಹೆದ್ದಾರಿಗೆ 8 ವರ್ಷಗಳ (2016) ಹಿಂದೆ 12.5 ಕೋಟಿ ರೂ ಖರ್ಚು ಮಾಡಿ ಡಿಪಿಆರ್ ಸಿದ್ಧಪಡಿಸಲಷ್ಟೇ ಈ ಸಂಸದರು ಶಕ್ತರಾಗಿದರು.
ಕಾರವಾರದಿಂದ ಇಳಕಲ್ ಸಂಪರ್ಕಿಸುವ 332 ಕಿ.ಮೀ ರಾಜ್ಯ ಹೆದ್ದಾರಿ ಯಲ್ಲಾಪುರ, ಮುಂಡಗೋಡ, ಬಂಕಾಪುರ, ಸವಣೂರ, ಲಕ್ಷ್ಮೇಶ್ವರ, ಗದಗ, ಗಜೇಂದ್ರಗಡ, ಹನುಮಸಾಗರ ಮೂಲಕ ಇಳಕಲ್ ಸಂಪರ್ಕಿಸುತ್ತದೆ. ಬಾಗಲಕೋಟ, ಗದಗ, ಹಾವೇರಿ, ಕಾರವಾರ 4 ಜಿಲ್ಲೆ ಸಂಪರ್ಕಿಸುವ ರಸ್ತೆಯನ್ನು ಮೇಲ್ದರ್ಜೆಗೇರಿಸಬೇಕು ಎಂಬ ಹಲವು ವರ್ಷಗಳ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ 2016ರಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಉನ್ನತೀಕರಿಸಲು ಗ್ರೀನ್ ಸಿಗ್ನಲ್ ನೀಡಿತ್ತು. 2016ರಲ್ಲಿ ಕೇಂದ್ರ ಸರ್ಕಾರ ಕಾರವಾರ-6ರ ಒಟ್ಟು 318 ಕಿ.ಮೀ ದ್ವಿಪಥ ರಸ್ತೆ ನಿರ್ಮಾಣದ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ದಪಡಿಸಲು 09-12-2016ರಂದು 12.48 ಕೋಟಿ ರೂಪಾಯಿಗಳ ಟೆಂಡರ್ ಕರೆಯಲಾಗಿತ್ತು.
ಕೋಟ್ಯಾಂತರ ರೂ ಹಣ ಖರ್ಚು ಮಾಡಿ ವರದಿ ಸಲ್ಲಿಸಿ 8 ವರ್ಷ ಕಳೆದರೂ ರಸ್ತೆ ಮೇಲ್ದರ್ಜೆಗೇರಲಿಲ್ಲ. ಈ ಕ್ಷೇತ್ರವನ್ನು ಪ್ರತಿನಿಧಿಸುವ ಬೊಮ್ಮಾಯಿ ಮುಖ್ಯಮಂತ್ರಿಗಳಾದರು, ಸಿ.ಸಿ. ಪಾಟೀಲ ಪಿಡಬ್ಲೂಡಿ ಸಚಿವರಾದರೂ ರಸ್ತೆ ಮಾತ್ರ ಸುಧಾರಣೆ ಕಾಣದ್ದರಿಂದ ಈ ಭಾಗದ ಜನರ ಗೋಳು ತಪ್ಪದಂತಾಗಿದೆ. ಈ ರಸ್ತೆ ಅಭಿವೃದ್ಧಿಯ ಬಗ್ಗೆ ಕೇಂದ್ರ ಸಚಿವರಿಗೆ ಮನವಿ ಮಾಡಿರುವ ಬೊಮ್ಮಾಯಿ ಅವರು ಈ ಕಾರ್ಯದಲ್ಲಿ ಯಶಸ್ಸು ಪಡೆಯುತ್ತಾರೆಯೇ ಕಾದು ನೋಡಬೇಕಿದೆ.