ದಾವಣಗೆರೆ:- ಅಲ್ಪಸಂಖ್ಯಾತರಿಗೆ ₹10 ಸಾವಿರ ಕೋಟಿ ನೆರವು ಸಿಎಂ ಹೇಳಿಕೆಗೆ ಎಂಪಿ ರೇಣುಕಾಚಾರ್ಯ ಫುಲ್ ಗರಂ ಆಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪಸಂಖ್ಯಾತರ ಅಭಿವೃದ್ಧಿಗೆ 10 ಸಾವಿರ ಕೋಟಿ ರು. ಅನುದಾನ ನೀಡುವುದಾಗಿ ಘೋಷಿಸಿದ್ದಾರೆ. ಆದರೆ, ಬಹುಸಂಖ್ಯಾತ ಹಿಂದೂಗಳಿಗೆ ಯಾವುದೇ ಅನುದಾನವನ್ನೂ ಕಾಂಗ್ರೆಸ್ ಸರ್ಕಾರ ನೀಡಿಲ್ಲ. ಮುಸ್ಲಿಮರಿಗೆ ಅನುದಾನ ನೀಡಬೇಕೆಂದರೆ ನಿಮ್ಮ ಆಸ್ತಿಗಳನ್ನು ಮಾರಾಟ ಮಾಡಿ ಕೊಡಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಾಕೀತು ಮಾಡಿದರು.
ದೇವಸ್ಥಾನಗಳ ಹುಂಡಿಗಳಿಗೆ ಹಿಂದೂ ಭಕ್ತರು ನೀಡುವ ಕಾಣಿಕೆ ಹಣವನ್ನು ಮುಸ್ಲಿಮರಿಗೆ ನೀಡುತ್ತೀರಾ? ಇಡೀ ರಾಜ್ಯವೇ ಬರದಿಂದ ತತ್ತರಿಸಿದೆ. ರೈತರಿಗೆ ಬೆಳೆ ಹಾನಿ ಪರಿಹಾರದ ಬಗ್ಗೆ ಚಕಾರ ಎತ್ತದ ಕಾಂಗ್ರೆಸ್ ಸರ್ಕಾರ ಹೇಳಿದಂತೆ ರೈತರ ಖಾತೆಗೆ 2 ಸಾವಿರ ರು. ಪರಿಹಾರ ಹಣ ಬಂದಿಲ್ಲ. ಒಬೊಬ್ಬ ಶಾಸಕರಿಗೂ ಕ್ಷೇತ್ರದ ಅಭಿವೃದ್ಧಿಗೆ 50 ಲಕ್ಷ ರು. ಮಾತ್ರ ಬಿಡುಗಡೆ ಮಾಡಲಾಗಿದೆ. ಬೆಳೆ ಹಾನಿಗೆ ತುತ್ತಾದ ರೈತರಿಗೆ ಈ ವರೆಗೆ ಸರ್ಕಾರ ಬೆಳೆ ಹಾನಿ ಪರಿಹಾರವನ್ನೇ ನೀಡಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕೊಟ್ಟ ಭರವಸೆಗಳ ಪೈಕಿ ಯಾವುದನ್ನೂ ಸಮರ್ಪಕವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಈಡೇರಿಸಿಲ್ಲ. ಶೇ.40 ಕಮಿಷನ್ ಸರ್ಕಾರ ಇದೆಂಬುದಾಗಿ ಸ್ವತಃ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಬಹಿರಂಗ ಹೇಳಿಕೆ ನೀಡಿದ್ದು, ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ ಎಂದು ರೇಣುಕಾಚಾರ್ಯ ಆರೋಪಿಸಿದರು.