ವಿಜಯಸಾಕ್ಷಿ ಸುದ್ದಿ, ಗದಗ : ರಾಜ್ಯ ಪಠ್ಯಕ್ರಮದ 9ನೇ ತರಗತಿಯ ಸಮಾಜವಿಜ್ಞಾನ ಪಠ್ಯಪುಸ್ತಕದಲ್ಲಿ ‘ವಿಶ್ವಗುರು ಬಸವಣ್ಣನವರು: ಸಾಂಸ್ಕೃತಿಕ ನಾಯಕ’ ಎಂಬ ಶೀರ್ಷಿಕೆಯ ಅಡಿಯಲ್ಲಿ ಬಸವಣ್ಣನವರನ್ನು ಕುರಿತು ಬರೆಯಲಾದ ಪರಿಚಯದ ವಿಷಯ ಸೂಕ್ತವಾಗಿದೆ. ಪಠ್ಯದಲ್ಲಿ ವೀರಶೈವ ಪದವನ್ನು ಕೈಬಿಟ್ಟಿರುವುದಕ್ಕೆ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯವರು ವ್ಯಕ್ತಪಡಿಸಿದ ತಕರಾರಿಗೆ ಯಾವುದೇ ಅರ್ಥವಿಲ್ಲ ಎಂದು ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಅಭಿಪ್ರಾಯಪಟ್ಟಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಶ್ರೀಗಳು, ಬಸವಣ್ಣನವರು ಐತಿಹಾಸಿಕ ವ್ಯಕ್ತಿ. ಅವರನ್ನು ಧರ್ಮಗುರು ಎಂದು ಒಪ್ಪದ, ಬಸವಣ್ಣನವರನ್ನು ತಮ್ಮ ಶಿಷ್ಯ-ಭಕ್ತ ಎಂದು ಹೇಳಿಕೊಳ್ಳುವ, ಪೌರಾಣಿಕ ಮತ್ತು ಕಾಲ್ಪನಿಕ ವ್ಯಕ್ತಿಗಳಿಂದ ತಮ್ಮ ಮೂಲವನ್ನು ಗುರುತಿಸಿಕೊಳ್ಳುವ ವ್ಯಕ್ತಿಗಳ ಅಭಿಪ್ರಾಯಕ್ಕೆ ಸರಕಾರ ಮನ್ನಣೆ ನೀಡಬಾರದು. ವೀರಶೈವ ಶಿವಾಚಾರ್ಯ ಸಂಸ್ಥೆಯ ಕೋರಿಕೆಯಂತೆ ಸರಕಾರ ಬಸವಣ್ಣನವರನ್ನು ಕುರಿತು ಈಗಿರುವ ಪಠ್ಯವಿಷಯವನ್ನು ಬದಲಿಸಲು ನಿರ್ಧರಿಸಿದರೆ ನಾಡಿನ ಅಸಂಖ್ಯಾತ ಬಸವಾಭಿಮಾನಿಗಳ ಘೋರ ವಿರೋಧವನ್ನು ಎದುರಿಸಬೇಕಾಗುತ್ತದೆ ಎಂದಿದ್ದಾರೆ.
ಬಸವಣ್ಣನವರು ಅರಿವನ್ನೇ ಗುರುವಾಗಿಸಿಕೊಂಡವರು. ಹಾಗೆಯೇ ‘ಅರಿವೇ ಗುರು’ ಎಂದು ಪ್ರತಿಪಾದಿಸಿದವರು. ಶರಣರ ವಚನಗಳ ಅಧ್ಯಯನದಿಂದ ಬಸವಣ್ಣನವರಿಂದಲೇ ಸಾಮಾಜಿಕ ಸಮಾನತೆ ಮತ್ತು ಆತ್ಮೋನ್ನತಿಗಾಗಿ ಇಷ್ಟಲಿಂಗದ ಪರಿಕಲ್ಪನೆ ಮೂಡಿಬಂದಿರುವುದು ಸ್ಪಷ್ಟವಾಗುತ್ತದೆ. ವಸ್ತುಸ್ಥಿತಿ ಹೀಗಿದ್ದರೂ ಈ ವಿಚಾರವನ್ನು ವಿರೋಧಿಸುವುದರ ಹಿಂದೆ ಐತಿಹಾಸಿಕವಲ್ಲದ ಪೌರಾಣಿಕ ವ್ಯಕ್ತಿಗಳನ್ನು ಬಸವಣ್ಣನವರಿಗೆ ಗುರುವಾಗಿಸುವ ತಂತ್ರಗಾರಿಕೆ ಇದೆ. ಕರ್ನಾಟಕ ಸರಕಾರ ಇಂಥ ತಂತ್ರಗಾರಿಕೆಗೆ ಮಣಿಯಬೇಕಾಗಿಲ್ಲ.
ತಾವು ಬಸವಾದಿ ಶರಣರ ವಚನಗಳನ್ನು ಓದಿ ಅರ್ಥೈಸಿಕೊಂಡವರು. ವಿಶ್ವಗುರು ಬಸವಣ್ಣನವರನ್ನು ‘ಸಾಂಸ್ಕೃತಿಕ ನಾಯಕ’ ಎಂದು ಘೋಷಣೆ ಮಾಡುವ ಮೂಲಕ ನಾಡವರ ಮೆಚ್ಚುಗೆಗೆ ಪಾತ್ರರಾದವರು. ಈ ಹಿನ್ನೆಲೆಯಲ್ಲಿ ಅತ್ಯಂತ ಯೋಗ್ಯರೀತಿಯಲ್ಲಿ ಪರಿಷ್ಕೃತವಾಗಿರುವ 9ನೇ ತರಗತಿಯ ಸಮಾಜವಿಜ್ಞಾನ ಪಠ್ಯಪುಸ್ತಕದಲ್ಲಿ ‘ವಿಶ್ವಗುರು ಬಸವಣ್ಣನವರು ಸಾಂಸ್ಕೃತಿಕ ನಾಯಕ’ ಶೀರ್ಷಿಕೆಯ ಪಾಠದಲ್ಲಿ ಯಾವುದೇ ದೋಷವಿಲ್ಲದ ಕಾರಣ ಯಾವ ಕಾಲಕ್ಕೂ ಅದನ್ನು ಬದಲಿಸಬಾರದು. ಪಠ್ಯ ವಿಷಯವನ್ನು ಯಥಾರೀತಿಯಲ್ಲಿ ಉಳಿಸಬೇಕೆಂದು ಕೋರಿದ್ದಾರೆ.