ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣ ಪ್ರಕರಣದಲ್ಲಿ ಲೋಕಾಯುಕ್ತ ನೀಡಿರುವ ಕ್ಲೀನ್‌ಚಿಟ್ ಕುರಿತು ಜನಪ್ರತಿನಿಧಿಗಳ ನ್ಯಾಯಾಲಯ ಇಂದು ಮಹತ್ವದ ಆದೇಶ ಪ್ರಕಟಿಸಲಿದೆ.
ಲೋಕಾಯುಕ್ತ ಸಲ್ಲಿಸಿರುವ ಬಿ-ರಿಪೋರ್ಟ್ ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ನ್ಯಾಯಾಲಯ ಮೆಟ್ಟಿಲೇರಿದ್ದರು. ಡಿ.19 ರಂದು ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಪ್ರಕರಣದ ಕೇಸ್ ಡೈರಿ ಸಲ್ಲಿಸುವಂತೆ ಸೂಚನೆ ನೀಡಿತ್ತು. ಬಿ-ರಿಪೋರ್ಟ್ ಸಂಬಂಧಿತ ಹೆಚ್ಚುವರಿ ವಾದ ಇದ್ದರೆ ಅದನ್ನೂ ಸಲ್ಲಿಸಲು ಲೋಕಾಯುಕ್ತ ಪೊಲೀಸರು ಮತ್ತು ದೂರುದಾರರಿಗೆ ನಿರ್ದೇಶನ ನೀಡಲಾಗಿತ್ತು. ಲೋಕಾಯುಕ್ತ ವಿಶೇಷ ಸರ್ಕಾರಿ ಅಭಿಯೋಜಕ ವೆಂಕಟೇಶ್ ಅರಬಟ್ಟಿ ಅಂತಿಮ ವರದಿ ಸಿದ್ಧವಾಗಿದೆ, ಆದರೆ ಅನುಮತಿ ಸಿಗದ ಕಾರಣ ಸೀಲ್ಡ್ ಕವರ್‌ನಲ್ಲಿ ಸಲ್ಲಿಸಲಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ದೂರುದಾರ ಸ್ನೇಹಮಯಿ ಕೃಷ್ಣ, ಪ್ರಕರಣದ ಅಂತಿಮ ವರದಿ ಇನ್ನೂ ಎರಡು ವರ್ಷಗಳ ಕಾಲ ಸಲ್ಲಿಸಲಾಗುತ್ತಿಲ್ಲ, ತನಿಖಾಧಿಕಾರಿಯನ್ನು ಕೇಳಿ ಪರಿಶೀಲನೆ ಮಾಡಬೇಕೆಂದು ಆರೋಪಿಸಿದ್ದಾರೆ. ಇಂದು ಪ್ರಕಟವಾಗುವ ಆದೇಶದಿಂದ ಸಿಎಂ ಕುಟುಂಬಕ್ಕೆ ಬಿಗ್ ರಿಲೀಫ್ ಸಿಗಬಹುದು ಅಥವಾ ದೊಡ್ಡ ಸಂಕಷ್ಟ ಎದುರಾಗಬಹುದು.



