ಮಡಿಕೇರಿ: ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೊಡಗಿನ ತಲಕಾವೇರಿಯಲ್ಲಿರುವ ತೀರ್ಥ ಕುಂಡಿಕೆಯಲ್ಲಿ ಅ.17 ರಂದು ಗುರುವಾರ ಬೆಳಗ್ಗೆ 7:40 ಕ್ಕೆ ಸಲ್ಲುವ ತುಲಾ ಲಗ್ನದಲ್ಲಿ ಕಾವೇರಿ ತೀರ್ಥ ರೂಪದಲ್ಲಿ ಉಗಮವಾಗಲಿದೆ. ಕಾವೇರಿಯ ಉಗಮ ಸ್ಥಳ ತಲಕಾವೇರಿಯ ಪವಿತ್ರ ಕುಂಡಿಕೆಯಲ್ಲಿ ಕಾವೇರಿ ತೀರ್ಥರೂಪಿಣಿಯಾಗಿ ಉಕ್ಕಿ ಬರುತ್ತಾಳೆಂಬ ನಂಬಿಕೆ ಇದೆ.
ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಮಾತೆ ಕಾವೇರಿ ಜಲರೂಪದಲ್ಲಿ ದರ್ಶನ ಕೊಡುತ್ತಾಳೆ ಎಂದು ನಂಬಲಾಗುವ ಪವಿತ್ರ ತೀರ್ಥೋದ್ಭವಕ್ಕೆ ಈಗಾಗಲೇ ಸಿದ್ಧತೆ ಕಾರ್ಯಗಳ ಚರ್ಚೆ ನಡೆಸಲಾಗುತ್ತಿದೆ.
ಪ್ರತಿ ವರ್ಷವೂ ತುಲಾ ಮಾಸದಲ್ಲಿ ನಡೆಯುವ ಈ ಜಾತ್ರೆಗೆ ಸೆ.26 ರಿಂದಲೇ ಸಿದ್ಧತೆ ಶುರುವಾಗುತ್ತದೆ. ಅಕ್ಟೋಬರ್ ಕಾಲಿಡುತ್ತಿದ್ದಂತೆಯೇ ಭಾಗಮಂಡಲ, ತಲಕಾವೇರಿಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣ ಆಗುತ್ತದೆ. ಇದುವರೆಗೂ ಕಾವೇರಿ ಭಕ್ತರ ಉತ್ಸಾಹಕ್ಕೆ ಯಾವುದೇ ಅಡ್ಡಿಯಾಗಿರಲಿಲ್ಲ. ಈ ಬಾರಿ ಬೆಳಗ್ಗೆ ತೀರ್ಥೋದ್ಭವ ಅಗುತ್ತಿರುವುದರಿಂದ ರಾಜ್ಯದ ನಾನಾ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಅಗಮಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.