ಗದಗ: ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಾರಿಗಳಲ್ಲಿದ್ದ ಬ್ಯಾಟರಿ ಹಾಗೂ ಸ್ಟೆಪ್ನಿ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
2025ರ ಡಿಸೆಂಬರ್ ತಿಂಗಳಲ್ಲಿ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಬಸ್ ನಿಲ್ದಾಣ ಹಾಗೂ ಮಠದ ಮುಂದೆ ನಿಲ್ಲಿಸಿದ್ದ ಲಾರಿಗಳಲ್ಲಿದ್ದ ಬ್ಯಾಟರಿ ಮತ್ತು ಸ್ಟೆಪ್ನಿ ಕಳ್ಳತನವಾಗಿದ್ದ ಕುರಿತು ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಗಾಗಿ ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ ಅವರ ಸೂಚನೆಯ ಮೇರೆಗೆ ವಿಶೇಷ ತಂಡ ರಚಿಸಲಾಯಿತು.
ನರಗುಂದ ಉಪವಿಭಾಗದ ಡಿ.ಎಸ್.ಪಿ ಪ್ರಭುಗೌಡ ಕಿರೇದಳ್ಳಿ ಅವರ ಮಾರ್ಗದರ್ಶನದಲ್ಲಿ, ಮುಂಡರಗಿ ಪೊಲೀಸ್ ಇನ್ವಸ್ಪೆಕ್ಟರ್ ಯಶವಂತ ಬಿಸನಳ್ಳಿ ಹಾಗೂ ಪಿಎಸ್‌ಐ (ಅಪರಾಧ) ಬಿ.ಎನ್. ಯಳವತ್ತಿ ನೇತೃತ್ವದ ತಂಡ 16-02-2026 ರಂದು ನಾಲ್ವರು ಆರೋಪಿತರನ್ನು ಬಂಧಿಸಿದೆ.
ಬಂಧಿತರನ್ನು ಸುನೀಲ ತಂದೆ ರಮೇಶ್ ಭಾವಳ್ಳಿ (25) ಅಳವಂಡಿ, ಕನಕಪ್ಪ ತಂದೆ ಶಂಕ್ರಪ್ಪ ಬಚನಳ್ಳಿ (22) ರಘುನಾಥನಹಳ್ಳಿ, ಅಂದಪ್ಪ ತಂದೆ ನಿಂಗಪ್ಪ ಬಿಸನಳ್ಳಿ (29) ಅಳವಂಡಿ ಹಾಗೂ ಪ್ರವೀಣ ತಂದೆ ಭರಮಪ್ಪ ಪೂಜಾರ (28) ರಘುನಾಥನಹಳ್ಳಿ ಎಂದು ಗುರುತಿಸಲಾಗಿದೆ.
ಆರೋಪಿತರು ಡಂಬಳ, ಕದಾಂಪೂರ, ಮೇವುಂಡಿ, ಬರದೂರು, ಮುಂಡರಗಿ ಹಾಗೂ ವೆಂಕಟಾಪೂರ ಹಾಗೂ ಜಂತ್ಲಿ ಗ್ರಾಮಗಳಲ್ಲಿ ನಿಲ್ಲಿಸಿದ್ದ ವಾಹನಗಳಿಂದ ಬ್ಯಾಟರಿ ಹಾಗೂ ಸ್ಟೆಪ್ನಿಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಪೊಲೀಸರು ಸುಮಾರು ₹3.70 ಲಕ್ಷ ಮೌಲ್ಯದ 40 ಎಕ್ಸೈಡ್ ಕಂಪನಿಯ ಬ್ಯಾಟರಿಗಳು, ಒಂದು ಸ್ಟೆಪ್ನಿ ಹಾಗೂ ಕಳ್ಳತನಕ್ಕೆ ಬಳಸಿದ KA-35/AA-1284 ನಂಬರಿನ ಬೊಲೇರೋ ವಾಹನ (ಸುಮಾರು ₹2 ಲಕ್ಷ ಮೌಲ್ಯ) ವಶಪಡಿಸಿಕೊಂಡಿದ್ದಾರೆ.
ಇದೇ ವೇಳೆ, ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾಗೇವಾಡಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಅಪಹರಣ ಪ್ರಕರಣದಲ್ಲೂ ಪೊಲೀಸರು ಆರೋಪಿತನನ್ನು 28-02-2026 ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ನೊಂದ ಬಾಲಕಿಗೆ ಸುರಕ್ಷಿತ ಸಂರಕ್ಷಣೆ ಒದಗಿಸಲಾಗಿದೆ.
ಈ ಎರಡು ಪ್ರಕರಣಗಳನ್ನು ಯಶಸ್ವಿಯಾಗಿ ಪತ್ತೆ ಹಚ್ಚಲು ಶ್ರಮಿಸಿದ ಮುಂಡರಗಿ ಪೊಲೀಸ್ ಇನ್ಸಪೆಕ್ಟರ್ ಯಶವಂತ ಬಿಸನಳ್ಳಿ, ಪಿಎಸ್‌ಐ ಬಿ.ಎನ್. ಯಳವತ್ತಿ, ಎಎಸ್‌ಐ ಎಸ್.ಎಂ. ಹಡಪದ ಹಾಗೂ ಸಿಬ್ಬಂದಿಗಳಾದ. ಜೆ ಐ ಬಚ್ಚೇರಿ, ಲಕ್ಷ್ಮಣ್ಣ ಲಮಾಣಿ, ಸುರೇಶ್ ಡೊಣ್ಣಿ, ಹೇಮಂತ ಹಂಚಿನಾಳ, ಬಾಬಾಜಾನ್ ಕಮ್ಮಾರ, ವಿರೇಶ್ ಬಿಸನಹಳ್ಳಿ, ವಿನಾಯಕ ಬಾಲರಡ್ಡಿ, ನಾಗರಾಜ್ ಹರಪನಹಳ್ಳಿ, ಶರಣಪ್ಪ ಓಜನಹಳ್ಳಿ ಬಸವರಾಜ ಬಣಕಾರ, ಮುಕ್ಕಣ್ಣ ಪೂಜಾರಗೆ ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ ಪ್ರಶಂಸೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.



