ವಿಜಯಸಾಕ್ಷಿ ಸುದ್ದಿ, ಗದಗ
ಗದಗ-ಬೆಟಗೇರಿ ಅವಳಿ ನಗರದಲ್ಲೀಗ ಬಹು ದೊಡ್ಡ ಚರ್ಚೆ ನಡೆದಿದ್ದು, ನಗರಸಭೆ ಯಾರ ತೆಕ್ಕೆಗೆ ಬೀಳಲಿದೆ ಎಂಬುದು ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ನಗರಸಭೆ ಗದ್ದುಗೆ ಕಾಂಗ್ರೆಸ್ ಪಾಲು: ಬಿಜೆಪಿ ಆಕ್ರೋಶ!
ಕಳೆದ ಹಲವು ದಿನಗಳಿಂದ ನೆನಗುದಿಗೆ ಬಿದ್ದಿದ್ದ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಫೆ.28ರಂದು ನಿಗದಿಪಡಿಸಿ ಈಗಾಗಲೇ ಉಪವಿಭಾಗಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಇದರ ಮಧ್ಯೆ ವಕಾರಸಾಲು ಲೀಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಬಿಜೆಪಿ ಸದಸ್ಯರ ಮೇಲೆ ಕೇಸ್ ಆಗಿ ಸದಸ್ಯತ್ವ ಅನರ್ಹಗೊಳಿಸಿ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದರು.
ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ಅನರ್ಹ ಸದಸ್ಯರು, ತಮ್ಮ ಸದಸ್ಯತ್ವ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದರು. ಅಷ್ಟೇ ಅಲ್ಲ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ಕೋರಿದ್ದರು.

ಧಾರವಾಡ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ನಡೆದ ತುರ್ತು ಅರ್ಜಿ ವಿಚಾರಣೆಯಲ್ಲಿ ನಗರಸಭೆ ಸದಸ್ಯರಾದ ಉಷಾ ದಾಸರ, ಅನಿಲ ಅಬ್ಬಿಗೇರಿ, ಗೂಳಪ್ಪ ಮುಶಿಗೇರಿ ಅವರಿಗೆ ಫೆ. ೨೮ರಂದು ನಡೆಯುವ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶ ನೀಡಿ ಆದೇಶ ಹೊರಡಿಸಿತ್ತು.
ನಂತರದ ಬೆಳವಣಿಗೆಯಲ್ಲಿ ಬೆಳಗಾವಿ ಪ್ರಾದೇಶಿಕ ಆಯುಕ್ತರು ತಮ್ಮ ಹಿಂದಿನ ಆದೇಶವನ್ನು ಮರುಜಾರಿಗೊಳಿಸಿ ಆದೇಶಿಸಿದ್ದು, ಆಯ್ಕೆ ಪ್ರಕ್ರಿಯೆ ಇನ್ನಷ್ಟು ಜಟಿಲವಾದಂತಾಗಿದೆ.
ಹೈಕೋರ್ಟ್ ಸೂಚನೆಯ ಅನುಸಾರ ಬೆಳಗಾವಿ ಪ್ರಾದೇಶಿಕ ಆಯುಕ್ತರು ಮೂವರೂ ಸದಸ್ಯರು ನೀಡಿದ್ದ ಲಿಖಿತ ಅಭಿಪ್ರಾಯ, ದಾಖಲೆಗಳನ್ನು ಮರುಪರಿಶೀಲಿಸಿದ್ದು, ಈ ಹಿಂದೆ ನೀಡಿದ ಆದೇಶ ಸರಿಯಾಗಿದೆ ಎಂದು ತಮ್ಮ ಆದೇಶವನ್ನು ಮರುಜಾರಿಗೊಳಿಸಿದ್ದಾರೆ.

ನಗರಸಭೆಯ ಗದ್ದುಗೆ ಏರುವ ಹಂಬಲದಲ್ಲಿದ್ದ ಬಿಜೆಪಿ ಸದಸ್ಯರಿಗೆ ಪುನಃ ನಿರಾಸೆಯಾಗಿದ್ದು, ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮತ್ತಷ್ಟು ಕಗ್ಗಂಟಾಗಿದೆ.




ಶುಕ್ರವಾರ ಮಧ್ಯಾಹ್ನದವರೆಗೂ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನಡೆಯುವ ಹೈ ಡ್ರಾಮಾಕ್ಕೆ ಗದಗ-ಬೆಟಗೇರಿ ಅವಳಿ ನಗರದ ಜನತೆ ಸಾಕ್ಷಿಯಾಗಲಿದ್ದಾರೆ.