ನಗರಸಭೆ ಚುನಾವಣೆ ಅಸಂವಿಧಾನಿಕ: ರಾಜು ಕುರಡಗಿ ಆರೋಪ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರಸಭೆಯ 2ನೇ ಅವಧಿಗೆ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಎಲ್ಲ ಅಧಿಕಾರಿಗಳನ್ನು ತಮ್ಮ ಪರವಾಗಿ ಬಳಸಿಕೊಳ್ಳುವ ಮೂಲಕ ಕಾನೂನು ಸಚಿವರು ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು‌ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಆರೋಪಿಸಿದ್ದು, ಕೂಡಲೇ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Advertisement

ಅವರು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರದಲ್ಲಿ ನಡೆದ ಚುನಾವಣೆ ಪ್ರಕ್ರಿಯೆ ಇಡೀ ರಾಜ್ಯವೇ ತಲೆತಗ್ಗಿಸುವಂತಿದೆ. ಚುನಾವಣೆ ಮುಂದೂಡುವಂತೆ ಕೋರ್ಟ್ ಆದೇಶ ನೀಡಿದ್ದರೂ ಸಚಿವರು ತಮ್ಮ ಅಧಿಕಾರ ದುರೂಪಯೋಗಪಡಿಸಿಕೊಂಡು ಎಲ್ಲ ಅಧಿಕಾರಿಗಳಿಂದ ತಮ್ಮ ಪರವಾಗಿ ಕೆಲಸ ಮಾಡಿಸಿಕೊಂಡಿದ್ದಾರೆ. ಸಂಪೂರ್ಣ ಆಯ್ಕೆ ಪ್ರಕ್ರಿಯೆ ಅಸಾಂವಿಧಾನಿಕವಾಗಿದೆ ಎಂದರು.

ನ್ಯಾಯಾಲಯ ಆದೇಶ ನೀಡಿದ್ದರೂ ಅದನ್ನು ಗಣನೆಗೆ ತೆಗೆದುಕೊಳ್ಳದೇ ಸಚಿವರ ಕೈಗೊಂಬೆಯಾಗಿ ವರ್ತಿಸಿ ಚುನಾವಣೆ ನಡೆಸಿದ ಉಪವಿಭಾಗಾಧಿಕಾರಿಗಳ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು.

ಚುನಾವಣೆಯನ್ನು ಪಕ್ಷಪಾತವಾಗಿ ನಡೆಸಿರುವ ಅಧಿಕಾರಿಯನ್ನು ತಕ್ಷಣವೇ ಅಮಾನತು ಮಾಡಬೇಕು ಎಂದು ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಬಿಜೆಪಿ ನಗರಸಭಾ ಸದಸ್ಯ ಚಂದ್ರು ತಡಸದ ಮಾತನಾಡಿ, ಫೆ.28ರಂದೇ ಚುನಾವಣೆ ಇರುವುದರಿಂದ ಸದಸ್ಯತ್ವ ರದ್ದುಗೊಳಿಸಿ ಆರ್‌ಸಿ ಅವರು ನೀಡಿರುವ ಆದೇಶ ರದ್ದು ಮಾಡಬೇಕು. ಇಲ್ಲ ಚುನಾವಣೆ ಮುಂದೂಡುವಂತೆ ಅರ್ಜಿ ಸಲ್ಲಿಸಿದ್ದೆವು.

ನಮ್ಮ ಅರ್ಜಿ ಪರಿಶೀಲಿಸಿದ ನ್ಯಾಯಾಲಯವು ಬುಧವಾರದವರೆಗೆ ಚುನಾವಣೆ ಮುಂದೂಡುವಂತೆ ಆದೇಶ ನೀಡಿತ್ತು. ಆದರೆ, ಚುನಾವಣಾಧಿಕಾರಿಯಾದ ಗಂಗಪ್ಪ ಎಂ ಅವರು ನ್ಯಾಯಾಲಯದ ಆದೇಶ ಪರಿಪಾಲನೆ ಮಾಡದೇ ಚುನಾವಣೆ ನಡೆಸಿದ್ದು ನ್ಯಾಯಾಂಗ ನಿಂದನೆ ಆಗಲಿದೆ. ಇದರ ವಿರುದ್ಧ ನಾವು ಕಾನೂನು ಹೋರಾಟ ಮುಂದುವರೆಸುತ್ತೇವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಸದಸ್ಯರಾದ ವಿನಾಯಕ ಮಾನ್ವಿ, ಮಾಧುಸಾ ಮೇರವಾಡೆ, ವಿಜಯಲಕ್ಷ್ಮಿ ದಿಂಡೂರ ಹಾಗೂ ಉಷಾ ದಾಸರ್ ಸೇರಿದಂತೆ ವಿವಿಧ ಸದಸ್ಯರು ಇದ್ದರು.

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಗೆಲ್ಲುವ ಉದ್ದೇಶದಿಂದಲೇ ನಮ್ಮವರ ಸದಸ್ಯತ್ವ ರದ್ದುಗೊಳಿಸಲಾಗಿದೆ. ಕಾಂಗ್ರೆಸ್‌ನವರು ಅಸಾಂವಿಧಾನಿಕವಾಗಿ ಚುನಾವಣೆ ಗೆದ್ದಿದ್ದಾರೆ. ಇದನ್ನು ಬಿಜೆಪಿಯ ಎಲ್ಲ ಸದಸ್ಯರು ಖಂಡಿಸುತ್ತೇವೆ ಎಂದು ಬಿಜೆಪಿ ನಗರಸಭಾ ಸದಸ್ಯ ಚಂದ್ರು ತಡಸದ ಹೇಳಿದರು.


Spread the love

LEAVE A REPLY

Please enter your comment!
Please enter your name here