ಆಡಳಿತಾರೂಢ ಸದಸ್ಯರಿಂದಲೇ ಅಪಸ್ವರ

0
Municipal General Assembly
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಅಭಿವೃದ್ಧಿ ಕಾಮಗಾರಿಗಳ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿದ್ದು, ಟೆಂಡರ್ ರದ್ದುಪಡಿಸುವಂತೆ ಆಡಳಿತಾರೂಢ ಪಕ್ಷದ ಕೆಲ ಸದಸ್ಯರೇ ಅಪಸ್ವರವೆತ್ತಿದ ಪ್ರಸಂಗ ಮಂಗಳವಾರ ಪುರಸಭೆ ಸಾಮಾನ್ಯ ಸಭೆಯಲ್ಲಿ ನಡೆಯಿತು.

Advertisement

ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣನವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಒಟ್ಟು 25 ವಿಷಯಗಳ ಮೇಲೆ ಚರ್ಚೆ ನಡೆಯಿತು. ಈ ವೇಳೆ 10 ಮತ್ತು 11ನೇ ವಿಷಯದಲ್ಲಿ ಪಟ್ಟಣದಲ್ಲಿನ ಕೆಲವು ವಾರ್ಡ್ಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಮಂಜೂರಾತಿ ಕೊಡುವ ಬಗ್ಗೆ ವಿಷಯ ಮಂಡನೆಯಾಗುತ್ತಿದ್ದಂತೆಯೇ ಅಸಮಾಧಾನಗೊಂಡ ಸದಸ್ಯರಾದ ರಾಮು ಗಡದವರ, ಎಸ್.ಕೆ. ಹವಾಲ್ದಾರ ಮತ್ತಿತರರು ಕಾಮಗಾರಿ ಹಂಚಿಕೆಯಲ್ಲಿ ನಮ್ಮ ವಾರ್ಡಿಗೆ ಅನ್ಯಾಯವಾಗಿದೆ. ನಮ್ಮ ವಾರ್ಡಿನ ಜನರು ನೀವೇನು ಅಭಿವೃದ್ಧಿ ಕೆಲಸ ಮಾಡಿದ್ದೀರಿ ಎಂದು ಕೇಳುವ ಪ್ರಶ್ನೆಗೆ ಉತ್ತರಿಸಬೇಕು. ಅನುದಾನ ಸಮನಾಗಿ ಹಂಚಿಕೆಯಾಗಬೇಕು. ಆದ್ದರಿಂದ ಟೆಂಡರ್ ಅನುಮೋದನೆ ಮಾಡದೇ ರದ್ದುಪಡಿಸಿ ಎಂದು ಪಟ್ಟು ಹಿಡಿದರು. ಈ ವೇಳೆ ಹಿರಿಯ ಸದಸ್ಯ ಕುಂಬಿ ಮತ್ತು ಮುಖ್ಯಾಧಿಕಾರಿಗಳು ಎಷ್ಟೇ ಸಮಜಾಯಿಷಿ ನೀಡಿದರೂ ಒಪ್ಪದ್ದರಿಂದ ಅನುಮೋದನೆಗೆ ತಡೆ ನೀಡಲಾಯಿತು.

ಮಳೆಗಾಲವಾದರೂ ತಿಂಗಳಿಗೊಮ್ಮೆ ನೀರು ಬಾರದ್ದರಿಂದ ಸಾರ್ವಜನಿಕರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗುತ್ತಿಲ್ಲ. ಕಾರಣ ಹೇಳಿ ಸಾಕಾಗಿದೆ. ಇನ್ನಾದರೂ ನೀರಿನ ವಿಷಯದಲ್ಲಿ ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಮಾಜಿ ಅಧ್ಯಕ್ಷೆ ಪೂರ್ಣಿಮಾ ಪಾಟೀಲರ ಹೇಳಿಕೆಗೆ ಸದಸ್ಯರು ದನಿಗೂಡಿದರು. ಈ ವೇಳೆ 15ನೇ ಹಣಕಾಸು ನಿರ್ಬಂಧಿತ ಅನುದಾನ 15 ಲಕ್ಷ 41 ಸಾವಿರ ಎಸ್‌ಎಫ್‌ಸಿ ಅನುದಾನದಲ್ಲಿ ಉಳಿಕೆಯಾದ 7 ಲಕ್ಷ 61 ಸಾವಿರ ಹಣವನ್ನು ನೀರಿನ ಸಮಸ್ಯೆ ನೀಗಿಸಲು ತುಂಗಭದ್ರಾ ನದಿಯಿಂದ ಮೇವುಂಡಿ ಜಾಕ್‌ವೆಲ್ ಹಾಗೂ ಸೂರಣಗಿ ನೀರು ಶುದ್ಧೀಕರಣ ಘಟಕದಲ್ಲಿನ ಯಂತ್ರೋಪಕರಣಗಳು, ಪೈಪ್‌ಲೈನ್ ದುರಸ್ಥಿಗೆ ಬಳಸಲು ಸರ್ವಾನುಮತದ ಒಪ್ಪಿಗೆ ಸೂಚಿಸಿದರು.

ಖಾಲಿ ಇರುವ ಪೌರ ಕಾರ್ಮಿಕರನ್ನು ತಾತ್ಕಾಲಿಕವಾಗಿ ನೇಮಿಸುವ ವಿಷಯ ಪ್ರಸ್ತಾಪದ ವೇಳೆ ಸದಸ್ಯ ರಾಜೀವ ಕುಂಬಿ, ಪ್ರವೀಣ ಬಾಳಿಕಾಯಿ, ವಿಜಯ ಕರಡಿ, ಜಯಮ್ಮ ಅಂದಲಗಿ ಮತ್ತಿತರರು ಮುಖ್ಯಾಧಿಕಾರಿ ಮಹೇಶ ಎಂ.ಎಚ್ ಮತ್ತು ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್ ವಿರುದ್ಧ ಹರಿಹಾಯ್ದರು. ಪಟ್ಟಣದಲ್ಲಿ ಸ್ವಚ್ಛತೆ, ತ್ಯಾಜ್ಯ ವಿಲೇವಾರಿ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ ಎದ್ದು ಕಾಣುತ್ತಿದೆ. ಸಾರ್ವಜನಿಕರು ಸದಸ್ಯರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಕೇವಲ ಪೌರ ಕಾರ್ಮಿಕರ ಕೊರತೆಯ ಸಮಸ್ಯೆ ಹೇಳದೇ ಅಧಿಕಾರಿಗಳಾದ ನೀವು ನಿತ್ಯವೂ ವಾರ್ಡ್ನ ವೀಕ್ಷಣೆ, ಪೌರಕಾರ್ಮಿಕರ ಮೇಲೆ ಮೇಲ್ವಿಚಾರಣೆ ಮಾಡಬೇಕು. ಆದಷ್ಟು ಬೇಗ ಜಿಲ್ಲಾಧಿಕಾರಿಗಳು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳ, ಜನಪ್ರತಿನಿಧಿಗಳ ಗಮನ ಸೆಳೆದು ಪೌರ ಕಾರ್ಮಿಕರನ್ನು ನಿಯೋಜಿಸುವ ಕೆಲಸವಾಗಬೇಕು ಎಂದರು.

ಪಟ್ಟಣದಲ್ಲಿನ ಇಟ್ಟಿಕೆರೆ ಅಭಿವೃದ್ಧಿಗೆ ಪುರಸಭೆಯಲ್ಲಿನ 56 ಲಕ್ಷ ರೂ ಕೆರೆ ಸಂರಕ್ಷಣಾ ನಿಧಿಯನ್ನು ಆರ್‌ಡಿಪಿಆರ್ ಇಲಾಖೆಗೆ ಹಸ್ತಾಂತರಿಸಿ ಕೆರೆ ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಾಧಿಕಾರಿ ಮಹೇಶ ಹಡಪದ ತಿಳಿಸಿದರು.

ಸಭೆಯಲ್ಲಿ ಅಂಗನವಾಡಿ ಕಟ್ಟಡಗಳಿಗೆ ನಿವೇಶನ ಕಲ್ಪಿಸುವುದು, ದ್ವಾರ ಬಾಗಿಲ ನಿರ್ಮಾಣ, ಶಿಗ್ಲಿ ನಾಕಾದಲ್ಲಿ ಮಳಗೆ ಮರು ಟೆಂಡರ್, ಮುಕ್ತಿವಾಹಿಸಿ ವಾಹನ ಖರೀದಿ ಸೇರಿದಂತೆ ಹಲವು ವಿಷಯಗಳು ಚರ್ಚೆಯಾಗಿ ಅನುಮೋದನೆಗೊಳಪಟ್ಟವು. ಪುರಸಭೆ ಉಪಾಧ್ಯಕ್ಷ ಫಿರ್ದೋಸ್ ಆಡೂರ ಸೇರಿ ಸದಸ್ಯರು, ಶಿಕ್ಷಣ, ಆರೋಗ್ಯ ಮತ್ತು ಪಶು ಇಲಾಖೆಯ ಅಧಿಕಾರಿಗಳು, ಪುರಸಬೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಸಭೆಯಲ್ಲಿ ಹಾಜರಿದ್ದ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಶ್ರೀಕಾಂತ ಕಾಟೇವಾಲೆ ಅವರಿಂದ ಮಾಹಿತಿ ಪಡೆದ ಸದಸ್ಯರು, ತಾಲೂಕಾ ಕೇಂದ್ರವಾದ ಪಟ್ಟಣದಲ್ಲಿ ಕೇವಲ 30 ಬೆಡ್‌ನ ಸರ್ಕಾರಿ ಆಸ್ಪತ್ರೆಯಿದ್ದು, ನಿತ್ಯ ಬರುವ ನೂರಾರು ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಲಭಿಸುತ್ತಿಲ್ಲ. ಕಾರಣ ಸರ್ವ ಸದಸ್ಯರು ಪಟ್ಟಣದಲ್ಲಿ 100 ಬೆಡ್ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರವನ್ನು ಒತ್ತಾಯಿಸೋಣ ಎಂಬ ನಿರ್ಧಾರ ಕೈಗೊಂಡರು.


Spread the love

LEAVE A REPLY

Please enter your comment!
Please enter your name here