ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಪುರಸಭೆಯಲ್ಲಿ ಸೋಮವಾರ 2024-25ನೇ ಸಾಲಿನ ಬಜೆಟ್ ಮಂಡನೆಯ ಸಭೆ ನಡೆಯಿತು. ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಅ 82 ಲಕ್ಷ 32 ಸಾವಿರ ರೂಗಳ ಉಳಿತಾಯ ಬಜೆಟ್ ಮಂಡಿಸಿದರು. ಬಜೆಟ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪುರಸಭೆ ನಿಧಿಯಿಂದ 72 ಲಕ್ಷ ರೂಗಳನ್ನು ಮೀಸಲಿರಿಸಿ, ನೀರಿನ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.
ಬಜೆಟ್ ಗಾತ್ರ 24 ಕೋಟಿ 44 ಲಕ್ಷ ರೂ. ಆಗಿದ್ದು, ಅದರಲ್ಲಿ ಎಲ್ಲ ಅಯವ್ಯಯ ಮಂಡನೆಯಾಗಿ ಒಟ್ಟು ಅಂದಾಜಿಸಿರುವ 23 ಕೋಟಿ 61 ಲಕ್ಷ 71 ಸಾವಿರ ಪಾವತಿಗಳನ್ನು ಕಳೆದು 82 ಲಕ್ಷ 32 ಸಾವಿರ ರೂ ಉಳಿತಾಯ ಬಜೆಟ್ ಘೋಷಿಸಿದರು. 2024-25ನೇ ಸಾಲಿಗೆ ಪುರಸಭೆ ವ್ಯಾಪ್ತಿಯ ಆಸ್ತಿ ಕರ, ಮಳಿಗೆ ಬಾಡಿಗೆ, ನೀರಿನ ಕರ, ಇತರೆ ಮೂಲಗಳಿಂದ ಬರುವ ಫೀ ಇವುಗಳಿಂದ ಒಟ್ಟು 3 ಕೋಟಿ 70 ಲಕ್ಷ 58 ಸಾವಿರ ರೂ ಮತ್ತು ಎಸ್‌ಎಫ್‌ಸಿ ಮುಕ್ತ ನಿಧಿ 15ನೇ ಹಣಕಾಸು ಮತ್ತು ಇತರೆ ಅನುದಾನ ಮೂಲದಿಂದ 9 ಕೋಟಿ 71 ಲಕ್ಷ 39 ಸಾವಿರ ಇತರೆ ಅಸಾಮಾನ್ಯ ಖಾತೆಯಿಂದ 1 ಕೋಟಿ 28 ಲಕ್ಷ 54 ಸಾವಿರ ನಿರೀಕ್ಷಸಲಾಗಿದೆ. ಹೀಗೆ ಒಟ್ಟು 14 ಕೋಟಿ 70 ಲಕ್ಷ 48 ಸಾವಿರ ಆದಾಯಕ್ಕೆ ಆರಂಭಿಕ ಶಿಲ್ಕು 9 ಕೋಟಿ 73 ಲಕ್ಷ 55 ಸಾವಿರ ಸೇರಿ ಒಟ್ಟು 24.44 ಕೋಟಿ ರೂ ಗಾತ್ರದ ಬಜೆಟ್ ವಿವರಿಸಿದರು.
ಪುರಸಭೆ ನಿಧಿಯಿಂದ ಆಡಳಿತ, ಕಚೇರಿ ವೆಚ್ಚ, ನೀರು ಸರಬರಾಜು, ಬೀದಿ ದೀಪ, ವಿದ್ಯುತ್ ಬಿಲ್, ರಸ್ತೆ, ಚರಂಡಿ ಇತ್ಯಾದಿಗಳಿಗೆ ಒಟ್ಟು 9.71 ಕೋಟಿಗೂ ಅಧಿಕ ಹಣವನ್ನು ಮೀಸಲಾಗಿಡಲಾಗಿದೆ. ಸರಕಾರಕ್ಕೆ ಕಟ್ಟಬೇಕಾದ ಉಪಕರ ಮತ್ತು ತೆರಿಗೆ ಇತ್ಯಾದಿಗಳಿಗಾಗಿ 2.64 ಕೋಟಿಗೂ ಅಧಿಕ ಹಣವನ್ನು ಮೀಸಲಿಡಲಾಗಿದೆ.
ಪುರಸಭೆ ನಿಧಿಯಲ್ಲಿ ಶೇ.24.10 ಪ.ಜಾ/ಪ.ಪಂ. ಕಲ್ಯಾಣಕ್ಕೆ 3.17 ಲಕ್ಷ, ಶೇ.7.25ರಲ್ಲಿ ಬಡಜನರ ಕಲ್ಯಾಣಕ್ಕಾಗಿ 96 ಸಾವಿರ, ಶೇ.5 ಅಂಗವಿಕಲರ ಕಲ್ಯಾಣಕ್ಕಾಗಿ 66 ಸಾವಿರ, ಕ್ರೀಡಾ ಚಟುವಟಿಕೆಗಳ ಪ್ರೋತ್ಸಾಹಕ್ಕೆ 13 ಸಾವಿರ, ಎಸ್‌ಎಫ್‌ಸಿ ಮುಕ್ತಿ ನಿಧಿಯಲ್ಲಿ ಶೇ.24.10 ಪ.ಜಾ/ಪ.ಪಂ ಕಲ್ಯಾಣಕ್ಕಾಗಿ 20 ಲಕ್ಷ ಹೀಗೆ ವಿವಿಧ ಕ್ಷೇತ್ರಗಳಿಗೆ ಸರಕಾರದ ನಿಯಮಗಳಂತೆ ಅನುದಾನವನ್ನು ಮೀಸಲಾಗಿಡಾಗಿದೆ ಎಂದು ಹೇಳಿದರು.
ಈ ವೇಳೆ ಪುರಸಭೆ ಸದಸ್ಯರಾದ ಜಯಕ್ಕ ಕಳ್ಳಿ, ಬಸವರಾಜ ಓದುನವರ, ಪಿರ್ಧೋಶ್ ಆಡೂರ, ರಾಮಣ್ಣ ಗಡದವರ, ಪೂರ್ಣಿಮಾ ಪಾಟೀಲ, ಜಯಕ್ಕ ಅಂದಲಗಿ, ಮಂಜವ್ವ ನಂದೆಣ್ಣವರ, ಮಂಜುಳಾ ಗುಂಜಳ, ಪೂಜಾ ಕರಾಟೆ, ಮುಸ್ತಾಕ್ ಶಿರಹಟ್ಟಿ, ಎಸ್.ಕೆ.ಹವಾಲ್ದಾರ, ಪ್ರವೀಣ ಬಾಳಿಕಾಯಿ, ಮಹಾದೇವಪ್ಪ ಅಣ್ಣಿಗೇರಿ, ಸಿಕಂದರ ಕಣಕೆ, ಕವಿತಾ ಶರಸೂರಿ, ವಾಣಿ ಹತ್ತಿ, ನೀಲವ್ವ ಮೆಣಸಿನಕಾಯಿ, ಸಮುದಾಯ ಸಂಘಟನಾ ಅಧಿಕಾರಿ ಶೋಭಾ ಬೆಳ್ಳಿಕೊಪ್ಪ, ವ್ಯವಸ್ಥಾಪಕಿ ಮಂಜುಳಾ ಹೂಗಾರ, ಶಿವಣ್ಣ ಮ್ಯಾಗೇರಿ, ಉಳ್ಳಟ್ಟಿ, ಶಿವಾನಂದ್ ಅಜ್ಜಣ್ಣವರ, ಮಂಜುನಾಥ ಮುದಗಲ್, ಮಹೇಶ ಹೊಸಮನಿ, ಹನುಮಂತ ನಂದೆಣ್ಣವರ ಸೇರಿ ಸಿಬ್ಬಂದಿಗಳಿದ್ದರು.
ಪ್ರಸಕ್ತ ವಾರ್ಷಿಕ ಬಜೆಟ್‌ನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಯೋಜನೆ ರೂಪಿಸಲಾಗಿದೆ. ಜನಸಾಮಾನ್ಯರಿಗೆ ತೆರಿಗೆ ಭಾರ ಹೆಚ್ಚಿಸದೇ ಆದಾಯ ಕ್ರೋಢೀಕರಣದತ್ತ ಪುರಸಭೆ ಚಿತ್ತ ಹರಿಸಿದೆ. ಪಟ್ಟಣ ತೀವೃಗತಿಯಲ್ಲಿ ಬೆಳೆಯುತ್ತಿದ್ದು, ಕುಡಿಯುವ ನೀರು, ರಸ್ತೆ, ಸ್ವಚ್ಛತೆ ಸೇರಿ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವ ಜವಾಬ್ದಾರಿ ಹೆಚ್ಚಿದೆ. ಎಲ್ಲ ಸದಸ್ಯರು ಸರಕಾರದಿಂದ ಹೆಚ್ಚಿನ ಅನುದಾನ ತರುವ ಮತ್ತು ನಿರೀಕ್ಷಿತ ಮಟ್ಟದಲ್ಲಿ ಕಂದಾಯ ಕ್ರೋಢೀಕರಣಕ್ಕೆ ಸಹಕಾರ ನೀಡಬೇಕು. ಕುಡಿಯುವ ನೀರಿನ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ೫೦ ಕೋಟಿ ರೂ ವೆಚ್ಚದ ಕ್ರಿಯಾಯೋಜನೆಯೊಂದಿಗೆ ಅನುದಾನ ತರುವ ಪ್ರಮಾಣಿಕ ಪ್ರಯತ್ನ ಮಾಡಲಾಗುತ್ತಿದೆ.
–ಮಹೇಶ ಹಡಪದ.
ಪುರಸಭೆ ಮುಖ್ಯಾಧಿಕಾರಿ.