ವಿಜಯಸಾಕ್ಷಿ ಸುದ್ದಿ, ಗದಗ : ನಗರಸಭೆಯ ಮುನ್ಸಿಪಲ್ ಶಾಲಾ-ಕಾಲೇಜು ಎಂದರೆ ಹಲವರ ಪಾಲಿಗೆ ದೇವಾಲಯವಿದ್ದಂತೆ. ಇಲ್ಲಿ ವಿದ್ಯಾಭ್ಯಾಸ ಕಲಿತ ಅನೇಕರು ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಉನ್ನತ ಮಟ್ಟಕ್ಕೆ ಬೆಳೆದಿದ್ದಾರೆ. ಆದರೆ, ಇಂದು ಇದೇ ಶಾಲಾ-ಕಾಲೇಜು ಸೂಕ್ತ ನಿರ್ವಹಣೆಯಿಲ್ಲದೆ ಪಾಳುಬೀಳುವ ಹಂತಕ್ಕೆ ತಲುಪಿರುವುದು ಶೋಚನೀಯ.
ಹಲವು ವರ್ಷಗಳ ಹಿಂದೆ ಪ್ರತಿನಿತ್ಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕರು ಆಗಮಿಸಿ ವಾಯು ವಿಹಾರ ಮಾಡುತ್ತಿದ್ದರು. ನಗರದ ಹೃದಯ ಭಾಗದಲ್ಲಿರುವ ಮೈದಾನಗಳಲ್ಲಿ ಇದೂ ಒಂದು. ಸ್ವಚ್ಛಂದ ವಾತಾವರಣ ಎಲ್ಲರನ್ನೂ ಆಕರ್ಷಿಸುತ್ತದೆ. ಆದರೆ, ನಿರ್ವಹಣೆ ಕೊರತೆಯಿಂದಾಗಿ ಮೈದಾನದ ತುಂಬೆಲ್ಲ ಗಿಡ-ಗಂಟಿಗಳು ಬೆಳೆದು ಸಂಪೂರ್ಣವಾಗಿ ಹಾಳಾಗಿದೆ.
ಮೈದಾನದ ಸ್ವಚ್ಛತೆಯ ಬಗ್ಗೆ ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಪ್ರಾರಂಭದಲ್ಲಿ ಯುವಕರ ಆಟೋಟಗಳಿಗೂ ಈ ಮೈದಾನ ಸಹಕಾರಿಯಾಗುತ್ತಿತ್ತು. ಮುನ್ಸಿಪಲ್ ಶಾಲಾ-ಕಾಲೇಜು ಮೈದಾನಕ್ಕೆ ಹೊಂದಿಕೊಂಡೇ ಅವಳಿ ನಗರದಾದ್ಯಂತ ಸಂಗ್ರಹಿಸುವ ಕಸ ವಿಲೇವಾರಿ ಕೂಡ ಇಲ್ಲಿಂದಲೇ ನಡೆಯುತ್ತಿದೆ. ಸ್ವಚ್ಛತೆಯ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸುವ ನಗರಸಭೆ ಅಧಿಕಾರಿಗಳೇ ತಮ್ಮ ವ್ಯಾಪ್ತಿಗೆ ಬರುವ ಮುನ್ಸಿಪಲ್ ಶಾಲಾ-ಕಾಲೇಜನ್ನು ಸ್ವಚ್ಛವಾಗಿರಿಸುವಲ್ಲಿ ವಿಫಲವಾಗಿರುವುದು ದುರ್ದೈವ.
ಆರೋಗ್ಯ ಇಲಾಖೆ, ನಗರಸಭೆ, ವಿವಿಧ ಸಂಘ-ಸಂಸ್ಥೆಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಇದೇ ಮೈದಾನದಿಂದ ಆರಂಭ ಮಾಡುತ್ತಾರೆ. ಆದರೆ, ಈ ಸ್ಥಳದಲ್ಲಿಯೇ ಸ್ವಚ್ಛತೆ ಇಲ್ಲದಂತಾಗಿದೆ. ಈ ಮಳೆಗಾಲದ ಸಮಯದಲ್ಲಂತೂ ಮೈದಾನದ ಅರ್ಧಭಾಗ ಜಲಾವೃತವಾಗಿರುತ್ತದೆ.
ಇದರಿಂದ ಸೊಳ್ಳೆಗಳ ಸಂತಾನೋತ್ಪತ್ತಿ ಜಾಸ್ತಿಯಾಗಿ ಡೆಂಘಿ ಹರಡುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ.
ಇನ್ನಾದರೂ ನಗರಸಭೆ ಅಧಿಕಾರಿಗಳು, ಸ್ಥಾಯಿ ಸಮಿತಿಯವರಾಗಲಿ ಮೈದಾನದ ಸ್ವಚ್ಛತೆಗೆ ಆದ್ಯತೆ ನೀಡಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುವು ಮಾಡಿಕೊಡಬೇಕೆಂಬ ಅಭಿಪ್ರಾಯ ಕೇಳಿಬರುತ್ತಿದೆ.
ಮುನ್ಸಿಪಲ್ ಶಾಲಾ-ಕಾಲೇಜಿನಲ್ಲಿ ಕಲಿತ ಹಲವರು ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಇಂತಹ ಶಾಲಾ-ಕಾಲೇಜಿನ ವಾತಾವರಣ ಇತ್ತೀಚಿನ ದಿನಗಳಲ್ಲಿ ಹಾಳಾಗುತ್ತಿರುವುದು ಬೇಸರದ ಸಂಗತಿ. ಸ್ವಚ್ಛತೆಯ ಕೊರತೆಯಿಂದಾಗಿ ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಸಂಬಂvಧಿಸಿದ ಅಧಿಕಾರಿಗಳು ಎಚ್ಚೆತ್ತು ಸ್ವಚ್ಛತೆ ಕಾಪಾಡುವುದರೊಂದಿಗೆ ವಿದ್ಯಾರ್ಥಿಗಳ ಆರೋಗ್ಯದ ಕಡೆ ಗಮನಹರಿಸಬೇಕು. ಇಲ್ಲವಾದಲ್ಲಿ ವಿವಿಧ ಸಂಘಟನೆಗಳ ಜೊತೆಗೂಡಿ ಸಾರ್ವಜನಿಕರು ನಗರಸಭೆಗೆ ಮುತ್ತಿಗೆ ಹಾಕಬೇಕಾಗುತ್ತದೆ.
– ಪ್ರೊ. ಪ್ರವೀಣಕುಮಾರ ಚಪ್ಪರಮನಿ.
ಪ್ರಾಧ್ಯಾಪಕರು.