ಪತ್ನಿ-ಪುತ್ರಿ ಸಹಿತ ನಾಲ್ವರ ಹತ್ಯೆ ಕೇಸ್: ಆರೋಪಿ ಎಡೆಮುರಿ ಕಟ್ಟಿದ ಪೊಲೀಸ್!

0
Spread the love

ಮಡಿಕೇರಿ:- ತನ್ನ ಪತ್ನಿ, ಪುತ್ರಿ, ಅತ್ತೆ ಹಾಗೂ ಮಾವನನ್ನು ಭೀಕರವಾಗಿ ಹತ್ಯೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

35 ವರ್ಷದ ಗಿರೀಶ್ ಬಂಧಿತ ಆರೋಪಿ. ಪತ್ನಿಯು, ತನ್ನ ಎರಡನೇ ಗಂಡನೊಂದಿಗೆ ಮತ್ತೆ ಸಂಬಂಧ ಬೆಳೆಸಿದ್ದಾಳೆ ಎಂದು ಶಂಕಿಸಿ ಆರೋಪಿ ಈ ಕೃತ್ಯ ಎಸಗಿದ್ದಾನೆ. ಈ ಘಟನೆ ಗುರುವಾರ ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಬೇಗೂರು ಸಮೀಪದ ಬಾಳಂಗಾಡು ಗ್ರಾಮದಲ್ಲಿ ನಡೆದಿತ್ತು. ಕೂಡಲೇ ಕಾರ್ಯಾಚರಣೆ ಕೈಗೊಂಡ ಪೊಲೀಸರು, ಹತ್ಯೆಗೈದ ಆರೋಪಿಯನ್ನು 9 ಗಂಟೆಯೊಳಗೆ ಕೇರಳದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹತ್ಯೆಯಾದವರನ್ನು ಕರಿಯ (75) ಗೌರಿ (70) ನಾಗಿ (35) ಹಾಗೂ ಕಾವೇರಿ (7) ಎಂದು ಗುರುತಿಸಲಾಗಿದೆ. ಬಾಳಂಗಾಡು ಎಂಬಲ್ಲಿ ಒಂಟಿ ಮನೆಯಲ್ಲಿ ಹತ್ಯೆಯಾದ ನಾಲ್ವರು ಸೇರಿದಂತೆ ಗಿರೀಶ್ ಕೂಡ ವಾಸವಾಗಿದ್ದರು. ಆರೋಪಿ ಗಿರೀಶ್ ನಾಗಿಯ ಮೂರನೇ ಗಂಡನಾಗಿದ್ದು, ಕಳೆದ ಒಂದು ವರ್ಷದಿಂದ ಒಟ್ಟಿಗೆ ನೆಲೆಸಿದ್ದರು. ಆದರೆ ನಾಗಿ ತನ್ನ ಎರಡನೇ ಪತಿಯೊಂದಿಗೆ ಮತ್ತೆ ಸಂಬಂಧ ಬೆಳೆಸಿದ್ದಾಳೆ ಎಂದು ಗಿರೀಶ್‌ಗೆ ಸಂಶಯ ವ್ಯಕ್ತವಾಗಿತ್ತು. ಇದರಿಂದ ಗುರುವಾರ ರಾತ್ರಿ ಎಲ್ಲರು ಮಲಗಿರುವಾಗ ನಾಲ್ವರನ್ನು ಕತ್ತಿಯಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ.

ಮಾರನೇ ದಿನ ಶುಕ್ರವಾರ ಮದ್ಯಾಹ್ನ 1.30ರ ಸುಮಾರಿಗೆ ಪೊನ್ನಂಪೇಟೆ ಠಾಣೆಯ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಸ್ಥಳಕ್ಕೆ ಕೊಡಗು ಎಸ್ಪಿ ರಾಮರಾನ್ ಭೇಟಿ ನಿಡಿ, ಪರಿಶೀಲನೆ ನಡೆಸಿದ್ದರು. ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆಗಾಗಿ ವಿರಾಜಪೇಟೆ ಉಪವಿಭಾಗದ ಡಿಎಸ್ಪಿರವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ ಕಾರ್ಯಾಚರಣೆಗಿಳಿಯಲಾಗಿತ್ತು. ಇದೇ ವೇಳೆ ಕೇರಳದ ತಲಪುಳ ಎಂಬಲ್ಲಿ ಆರೋಪಿಯನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here