ವಿಜಯನಗರ:- ವಿಮೆ ಹಣಕ್ಕಾಗಿ ಸಿನಿಮೀಯ ರೀತಿಯಲ್ಲಿ ಕೊಲೆ ಮಾಡಿ ಬಳಿಕ ಖದೀಮರು ನಕಲಿ ಹೆಂಡತಿ ಸೃಷ್ಟಿ ಮಾಡಿ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಹೊಸಪೇಟೆಯ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.ಹೊಸಪೇಟೆ ನಗರದ ಕೌಲ್ ಪೇಟೆ ನಿವಾಸಿ ಗಂಗಾಧರ ಮೃತ ವ್ಯಕ್ತಿ. 5 ಕೋಟಿ 20 ಲಕ್ಷದ ರೂ ಇನ್ಶುರೆನ್ಸ್ ಹಣಕ್ಕೆ ದುರಳರು ಈ ಕೊಲೆ ಮಾಡಿದ್ದಾರೆ. ತೆಲುಗು ನಟ ನಾಗರ್ಜುನ್ ನಟನೆಯ ಕುಬೇರ ಸಿನಿಮಾದಲ್ಲಿ ಬ್ಲಾಕ್ ಮನಿ, ವೈಟ್ ಮಾಡಲು ಅಲ್ಲಿ ಭಿಕ್ಷುಕರ ಮರ್ಡರ್ ಮಾಡಿದ್ರೆ, ಇಲ್ಲಿ ಇನ್ಶುರೆನ್ಸ್ ಹಣಕ್ಕಾಗಿ ಕಿರಾತಕರು ಅಮಾಯಕನ ಕೊಲೆ ಮಾಡಿ ಇದೀಗ ಖಾಕಿ ಬಲೆಗೆ ಬಿದ್ದಿದ್ದಾರೆ. ಕೊಲೆ ಮಾಡಿ ಅಪಘಾತ ಅಂತ ಬಿಂಬಿಸಲು ಹೋಗಿದ್ದ ಗ್ಯಾಂಗ್ ಇದೀಗ ಖಾಕಿಗೆ ಸಿಕ್ಕಿಬಿದ್ದಿದ್ದಾರೆ.ಘಟನೆ ನಡೆದಿದ್ದು ಹೇಗೆ?ಮೊದಲಿಗೆ ಹೊಸಪೇಟೆಯ ಹೊರವಲಯದ ಸಂಡೂರು ರಸ್ತೆಯಿಂದ HLC ಕಾಲುವೆಯ ಮೂಲಕ ಜಂಬುನಾಥ ಹಳ್ಳಿಗೆ ಹೋಗುವ ರಸ್ತೆಯಲ್ಲಿ ಗಂಗಾಧರನನ್ನು ಕೊಲೆ ಮಾಡಿ ಬಳಿಕ ಎಕ್ಸೆಲ್ ಬೈಕ್ ಮೇಲೆ ಕೂರಿಸಿ ಕಾರಿನಿಂದ ಗುದ್ದಿ ಪರಾರಿ ಆಗಿದ್ದಾರೆ.ಖದೀಮರು ಮೃತ ಗಂಗಾಧರ್ ಹೆಸರಲ್ಲಿ 5 ಕೋಟಿ, 20 ಲಕ್ಷ ಇನ್ಶುರೆನ್ಸ್ ಮಾಡಿಸಿದ್ದರು ಎಂದು ತಿಳಿದು ಬಂದಿದೆ. ಕೊಲೆಯಾದ ಗಂಗಾಧರನ ಹೆಂಡತಿ ಶಾರದಾ ನೀಡಿದ ದೂರಿನ ಮೇಲೆ ಹೊಸಪೇಟೆಯ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ದೂರು ದಾಖಲಿಸಿದ 24 ಗಂಟೆಯಲ್ಲೇ ಪ್ರಕರಣ ಭೇದಿಸಿದ್ದಾರೆ. ಓರ್ವ ಮಹಿಳೆ ಸೇರಿದಂತೆ 6 ಜನರನ್ನು ಅರೆಸ್ಟ್ ಮಾಡಿದ್ದಾರೆ.ಬಂಧಿತ ಆರೋಪಿಗಳನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿ ಕೃಷ್ಣಪ್ಪ, ಕೊಪ್ಪಳ ಜಿಲ್ಲೆಯ ಹೊಸಲಿಂಗಾಪುರ ಗ್ರಾಮದ ನಿವಾಸಿ ರವಿ ಗೋಸಂಗಿ, ವಿಜಯನಗರ ಜಿಲ್ಲೆಯ ಹೊಸಪೇಟೆ ನಿವಾಸಿಗಳಾದ ಅಜೆಯ, ರಿಯಾಜ್, ಯೋಗರಾಜ್ ಸಿಂಗ್, ನಕಲಿ ಹೆಂಡತಿ ಹುಲಿಗೆಮ್ಮ ಎಂದು ಗುರುತಿಸಲಾಗಿದೆ.ಬಂಧಿತರಿಂದ ಕೃತ್ಯಕ್ಕೆ ಬಳಸಿದ ಕಾರು, ಬೈಕ್ ವಶಕ್ಕೆ ಸೀಜ್ ಮಾಡಲಾಗಿದೆ. ಹೊಸಪೇಟೆ ವಿಭಾಗದ ಡಿವೈಎಸ್ಪಿ ಡಾ. ಮಂಜುನಾಥ ತಳವಾರ ಮಾರ್ಗದರ್ಶನದಲ್ಲಿ ಸಂಚಾರಿ ಠಾಣೆ ಸಿಪಿಐ ಹುಲಗಪ್ಪ, ಹೊಸಪೇಟೆ ನಗರ ಠಾಣೆ ಸಿಪಿಐ ಲಖನ್ ಮುಸಗುಪ್ಪಿ ತಂಡದ ಪೊಲೀಸರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿ ವಿಜಯನಗರ ಎಸ್ಪಿ ಎಸ್. ಜಾಹ್ನವಿ ಬಹುಮಾನ ಘೋಷಿಸಿದ್ದಾರೆ.
ಇನ್ಶುರೆನ್ಸ್ ಹಣಕ್ಕಾಗಿ ಅಮಾಯಕನ ಕೊಲೆ: ನಕಲಿ ಹೆಂಡ್ತಿ ಸೃಷ್ಟಿಸಿ ಸಿಕ್ಕಿಬಿದ್ದ ಖದೀಮರು, ಪೊಲೀಸರ ಕಾರ್ಯಕ್ಕೆ ಪ್ರಶಂಸೆ!
Advertisement