ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಂಗೀತ ಮನುಷ್ಯರಿಗಷ್ಟೇ ಅಲ್ಲದೆ ಪಶುಗಳಿಗೂ, ಶಿಶುಗಳಿಗೂ ಅರ್ಥವಾಗುವಂತಹ ಕಲೆಯಾಗಿದೆ. ಸಂಗೀತಕ್ಕೆ ಒಲಿಯದ ಮನವಿಲ್ಲ. ಸಂಗೀತವನ್ನು ಕೇಳುವದು, ಹಾಡುವದರಿಂದ ದೇಹದ ಚೈತನ್ಯ ಶಕ್ತಿ ವೃದ್ಧಿಸುತ್ತದೆ ಎಂದು ಗದಗ ಪಿಪಿಜೆ ಕಾಲೇಜಿನ ಪತ್ರಿಕೋದ್ಯಮ ಉಪನ್ಯಾಸಕ ಅಂಬಣ್ಣ ಜಮಾದಾರ ಹಾಗೂ ಕಲ್ಲೂರಿನ ಸಂಗೀತ ಶಿಕ್ಷಕ ಮಹಾಂತೇಶ ಶಾಸ್ತ್ರೀ ಹಿರೇಮಠ ಹೇಳಿದರು.
ಅವರು ಪಟ್ಟಣದ ಶಾರದಾ ಸ್ವರಾಂಜಲಿ ಸಂಗೀತ ಪಾಠಶಾಲೆಯ ಸಂಗೀತ ಶಿಕ್ಷಕ ಲಕ್ಷ್ಮಣ ತಳವಾರ ಅವರ ಬೀಳ್ಕೊಡುಗೆ, ಸಂಗೀತ ಶಿಕ್ಷಕ ಮಂಜುನಾಥ ಬದಾಮಿ ಅವರಿಗೆ ಸ್ವಾಗತ ಮತ್ತು ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಸಕ್ತಿಯಿಂದ ಸಂಗೀತ ಆಲಿಸಿ, ನಿರಾಳತೆಯನ್ನು ಹೊಂದುವವರು ಯಾವಾಗಲೂ ಸುಖಿಗಳಾಗಿರುತ್ತಾರೆ. ಸಂಗೀತಕ್ಕೆ ದೊಡ್ಡ ಗೌರವವಿದ್ದು, ಡಾ. ಪಂಡಿತ ಪುಟ್ಟರಾಜರ ಶಿಷ್ಯ ಬಳಗ ನಾಡಿನ ತುಂಬ ಸಂಗೀತ ಕಚೇರಿ ನಡೆಸುತ್ತಿದ್ದಾರೆ. ಸಂಗೀತವನ್ನು ಮನಸ್ಸಿಟ್ಟು ಕಲಿತರೆ ಸಾಧನೆ ಮಾಡಬಹುದು ಎಂದು ಹೇಳಿದರು.
ನಿವೃತ್ತ ಶಿಕ್ಷಕ ಎಸ್.ಎಸ್. ನಾಗಲೋಟಿ ಮಾತನಾಡಿ, ಸಂಗೀತಕ್ಕೆ ನೋವು, ದುಃಖ, ಆತಂಕ, ಖಿನ್ನತೆಯನ್ನು ಮರೆಸುವ ಶಕ್ತಿ ಇದೆ. ಮಾನಸಿಕ ಆರೋಗ್ಯವನ್ನು ಸಂಗೀತದಿಂದ ವೃದ್ಧಿಸಬಹುದು. ಸಂಗೀತಕ್ಕೆ ಎಲ್ಲವನ್ನೂ ಮರೆಸಿ ತನ್ನೊಳಗೆ ಸೆಳೆದುಕೊಳ್ಳುವ ಶಕ್ತಿ ಇದೆ ಎಂದು ಹೇಳಿದರು.
ಶಾರದಾ ಸ್ವರಾಂಜಲಿ ಸಂಗೀತ ಪಾಠಶಾಲೆಯ ಸಂಸ್ಥಾಪಕ ಮಂಜುನಾಥ ಮುಳುಗುಂದ, ಅರ್ಚಕ ಸಿದ್ದಲಿಂಗಯ್ಯ ಹಿರೇಮಠ, ಶಿಕ್ಷಕಿ ಮೈತ್ರಾದೇವಿ ಹಿರೇಮಠ ಮಾತನಾಡಿದರು. ಸತತ ಆರು ವರ್ಷಗಳ ಕಾಲ ಸಂಗೀತ ಸೇವೆ ನೀಡಿದ ಸಂಗೀತ ಶಿಕ್ಷಕ ಲಕ್ಷ್ಮಣ ತಳವಾರ ಅವರನ್ನು ಸನ್ಮಾನಿಸಿ ಬಿಳ್ಕೊಡಲಾಯಿತು. ನೂತನ ಶಿಕ್ಷಕ ಮಂಜುನಾಥ ಬದಾಮಿ ಅವರನ್ನು ಸನ್ಮಾನಿಸಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಪಂಚಯ್ಯ ಸಾಲಿಮಠ, ಕಾರ್ಯದರ್ಶಿ ಸಾವಿತ್ರಿ ಮುಳುಗುಂದ, ಪ್ರೇವiಕ್ಕ ಮುಳುಗುಂದ, ಐ.ಸಿ. ಕಣವಿ, ಮಂಜುನಾಥ್ ಹುಣಿಸಿಮರದ, ಕಿರಣ ನಾಗಲೋಟಿ, ಶಿವಶಂಕರ ಅಂಬಿಗೇರ ಹಾಗೂ ವಿದ್ಯಾರ್ಥಿಗಳು ಇದ್ದರು. ಶ್ರೀಲಕ್ಷ್ಮೀ ಪಾಟೀಲ್ ಸ್ವಾಗತಿಸಿದರು. ಜಯಶ್ರೀ ಮುಳುಗುಂದ ನಿರೂಪಿಸಿದರು. ಪೂಜಾ ಹಬೀಬ್ ವಂದಿಸಿದರು.