ದಕ್ಷಿಣ ಭಾರತದ ಸಂಗೀತ ಲೋಕಕ್ಕೆ ಆಘಾತಕಾರಿ ಸುದ್ದಿ. ‘ಹೃದಯ ಸಮುದ್ರ ಕಲಕಿ’ ಹಾಡಿನ ಮೂಲಕ ಕನ್ನಡಿಗರ ಹೃದಯಕ್ಕೆ ಶಾಶ್ವತವಾಗಿ ನೆಲೆಸಿದ್ದ ಖ್ಯಾತ ಸಂಗೀತ ನಿರ್ದೇಶಕ ಎಸ್ಪಿ ವೆಂಕಟೇಶ್ ಅವರು ಇಂದು (ಫೆಬ್ರವರಿ 03) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. 71 ವರ್ಷದ ಅವರು ಚೆನ್ನೈನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಗಿಟಾರಿಸ್ಟ್ ಆಗಿ ಸಿನಿ ಜೀವನ ಆರಂಭಿಸಿದ ವೆಂಕಟೇಶ್, ತಮ್ಮ ಸಂಗೀತ ಪಯಣವನ್ನು ಕೇವಲ ಒಂದು ಭಾಷೆಗೆ ಸೀಮಿತಗೊಳಿಸದೆ, ಕನ್ನಡ, ತಮಿಳು, ಮಲಯಾಳಂ, ತೆಲುಗು, ಹಿಂದಿ ಹಾಗೂ ಬೆಂಗಾಲಿ ಚಿತ್ರರಂಗಗಳವರೆಗೆ ವಿಸ್ತರಿಸಿದರು. ಮಲಯಾಳಂ ಮತ್ತು ತಮಿಳಿನ ಹಲವಾರು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಅವರ ಸಂಗೀತವೇ ಚಿತ್ರದ ಶಕ್ತಿಯಾಗಿತ್ತು.
ಕನ್ನಡದಲ್ಲಿ ‘ಪ್ರೇಮ ಯುದ್ಧ’ ಮೂಲಕ ಆರಂಭವಾದ ಅವರ ಪಯಣ ‘ಅಶ್ವಮೇಧ’, ‘ಶರವೇಗದ ಸರದಾರ’, ‘ಸುಂದರಕಾಂಡ’, ‘ಪಂಚಮವೇದ’, ‘ಮೇಘ ಮಂದಾರ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಸಂಗೀತದ ಮಾಯಾಜಾಲವನ್ನು ಸೃಷ್ಟಿಸಿತು. ‘ಹೃದಯ ಸಮುದ್ರ ಕಲಕಿ’ ಹಾಡು ಕೇಳದ ಕನ್ನಡಿಗನೇ ಇಲ್ಲ ಎನ್ನುವ ಮಟ್ಟಿಗೆ ಅವರ ಸಂಗೀತ ಜನಮನದಲ್ಲಿ ನೆಲೆಯಾಗಿದೆ.
ಹಿಂದಿ ಚಿತ್ರರಂಗದಲ್ಲೂ ತಮ್ಮ ಛಾಪು ಮೂಡಿಸಿದ್ದ ಎಸ್ಪಿ ವೆಂಕಟೇಶ್, ಸಲ್ಮಾನ್ ಖಾನ್ ನಟನೆಯ ‘ಕ್ಯೂಂಕಿ’, ‘ಥೇವರ್ ಮಗನ್’ ರೀಮೇಕ್ ‘ವಿರಾಸತ್’ ಹಾಗೂ ಕಲ್ಟ್ ಕಾಮಿಡಿ ಸಿನಿಮಾ ‘ಹಂಗಾಮ’ಗಳಿಗೆ ಸಂಗೀತ ನೀಡಿ ರಾಷ್ಟ್ರಮಟ್ಟದಲ್ಲೂ ಗುರುತಿಸಿಕೊಂಡಿದ್ದರು. ಮಲಯಾಳಂ ಚಿತ್ರರಂಗದಲ್ಲಂತೂ ಅವರು ಸಂಗೀತದ ಭರವಸೆಯ ಹೆಸರಾಗಿದ್ದರು.
ಅವರ ನಿಧನಕ್ಕೆ ಮಲಯಾಳಂ ನಟ ಸುರೇಶ್ ಗೋಪಿ, ನಿರ್ದೇಶಕ ಉನ್ನಿಕೃಷ್ಣ ಸೇರಿದಂತೆ ಹಲವು ಸಿನಿಮಾ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದು, ತಮಿಳು ಚಿತ್ರರಂಗದ ಗಾಯಕರು ಹಾಗೂ ಸಂಗೀತಕರ್ಮಿಗಳು ಕೂಡ ಭಾವುಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಎಸ್ಪಿ ವೆಂಕಟೇಶ್ ಅವರ ಅಂತಿಮ ಕಾರ್ಯಗಳು ನಾಳೆ (ಫೆಬ್ರವರಿ 04) ಚೆನ್ನೈನಲ್ಲಿ ನಡೆಯಲಿವೆ.



