ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು: ಜೀವನದ ಜಂಜಾಟದಲ್ಲಿ ಮುಳುಗಿರುವ ಮನುಷ್ಯನ ಮನಕ್ಕೆ ಸಂಗೀತ ಮುದ ನೀಡುತ್ತದೆ. ಅನೇಕ ರೋಗಗಳಿಗೆ ಸಂಗೀತ ಸಂಜೀವಿನಿಯಾಗಿದೆ. ಗಿಡ-ಮರಗಳೂ ಸಂಗೀತವನ್ನು ಆಸ್ವಾದಿಸುತ್ತವೆ ಎಂಬುದು ವೈಜ್ಞಾನಿಕ ಸತ್ಯವಾಗಿದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಜರುಗಿದ ಸಂಗೀತ-ಸೌರಭ ಹಾಗೂ ನಗೆ ಹಬ್ಬ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸಂಗೀತ ಆಸ್ವಾದಿಸುವುದರ ಜೊತೆಗೆ ಮನುಷ್ಯನಿಗೆ ಹಾಸ್ಯ ಪ್ರಜ್ಞೆಯೂ ಮುಖ್ಯವಾಗಿದೆ. ನಗುವುದರಿಂದ ಮನಸ್ಸು ಉಲ್ಲಸಿತಗೊಳ್ಳುತ್ತದೆ. ಮೈ, ನರ-ನಾಡಿಗಳು ಸಡಿಲಗೊಳ್ಳುತ್ತವೆ. ಉತ್ತಮ ಹಾಸ್ಯದ ಮೂಲಕ ಜನರನ್ನು ನಗಿಸುವುದೂ ಒಂದು ಕಲೆಯಾಗಿದೆ ಎಂದರು.
ಮಲೆಬೆನ್ನೂರಿನ ಜೆಡಿಎಸ್ ಮುಖಂಡ ಬಿ.ಚಿದಾನಂದಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಸಮಾರಂಭದಲ್ಲಿ ಮುಕ್ತಿಮಂದಿರ, ಸುಳ್ಳ, ನಿಲೊಗಲ್ಲ, ಕಲಾದಗಿ, ಕವಲೇದುರ್ಗ, ಬಿಳಕಿ, ಬೇರುಗಂಡಿ, ಹಾರನಹಳ್ಳಿ ಕೆಂಭಾವಿ, ಸಿಂದಗಿ, ಸಂಗೊಳ್ಳಿ, ಸಿದ್ಧರಬೆಟ್ಟ, ಜಕ್ಕಲಿ-ಹಾರನಹಳ್ಳಿ ಮಠಗಳ ಶ್ರೀಗಳು ಉಪಸ್ಥಿತರಿದ್ದರು. ಕಲಬುರ್ಗಿ ಚವದಾಪುರಿ ಹಿರೇಮಠದ ಡಾ. ರಾಜಶೇಖರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು.
ಡಾ. ರಾಜಗುರು ಗುರುಸ್ವಾಮಿ ಕಲಕೇರಿ ನಡೆಸಿಕೊಟ್ಟ ಸಂಗೀತ ಸೌರಭ ಜನಮನವನ್ನು ಸೂರೆಗೊಂಡಿತು. ಇವರ ಸಂಗೀತಕ್ಕೆ ಬಸಲಿಂಗಯ್ಯ ಹಿರೇಮಠ ತಬಲಾ ಸಾಥ್ ನೀಡಿದರೆ, ಗುರುಲಿಂಗಸ್ವಾಮಿ ಹಿತ್ತಲ ಶಿರೂರ ಹರ‍್ಮೊನಿಯಂ ಸಾಥ್ ನೀಡಿದರು. ಟಿ.ವಿ ಹಾಸ್ಯ ಕಲಾವಿದ ಶರಣು ಹಿರೇಮಠ ಹಲವಾರು ಸಂಗತಿಗಳನ್ನು ಹಾಸ್ಯಭರಿತವಾಗಿ ಹೇಳುವ ಮೂಲಕ ಜನರನ್ನು ನಗೆಗಡಲಲ್ಲಿ ತೇಲಿಸಿದರು. ಗದಗ ಜಾನಪದ ಸಂಜೀವಿನಿಯ ಗವಿಸಿದ್ದಯ್ಯ ಹಳ್ಳಿಕೇರಿಮಠ ಜಾನಪದ ಹಾಡುಗಳ ಮೂಲಕ ಜನತೆಯನ್ನು ರಂಜಿಸಿದರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ ಜರುಗಿತು. ಸಿಂಧನೂರು-ಕನ್ನೂರು ಮಠದ ಸೋಮನಾಥ ಶಿವಾಚಾರ್ಯ ಸ್ವಾಮಿಗಳು ಸ್ವಾಗತಿಸಿದರು. ಮಳಲಿ ಸಂಸ್ಥಾನಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ನಿರೂಪಿಸಿದರು.
ಸಮಾರಂಭದ ನಂತರ ಹುಬ್ಬಳ್ಳಿಯ ಜೀವಿ ಚಿತ್ರಾಲಯುದವರು ನಿರ್ಮಿಸಿರುವ ಗುರುಜೀವಿ ನಿರ್ದೇಶನದ `ರೇಣುಕ ಬೋಧೆ’ ಟೆಲಿಫಿಲ್ಮ್ ಪ್ರದರ್ಶನವನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಉದ್ಘಾಟಿಸಿ, ವೀಕ್ಷಿಸಿ ಶುಭ ಹಾರೈಸಿದರು.