ಕನ್ನಡದ ನಾಡಿನಲ್ಲಿ ಹುಟ್ಟಿದ ಅನರ್ಘ್ಯ ರತ್ನವೊಂದು ವಿಶ್ವ ಚಲನಚಿತ್ರ ರಂಗಕ್ಕೆ ಮುಕುಟಮಣಿ ಆಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆ ಅನರ್ಘ್ಯ ರತ್ನವೇ ಕನ್ನಡದ ವರನಟ, ನಟ ಸಾರ್ವಭೌಮ ಡಾ. ರಾಜಕುಮಾರ. ಎಪ್ರಿಲ್ 12ರಂದು ಜನಿಸಿದ ಈ ಕುವರ ಮುಂದೆ ಚಲನಚಿತ್ರ ರಂಗದಲ್ಲಿ ಪ್ರಸಿದ್ಧನಾಗುತ್ತಾನೆ ಎಂದು ಯಾರೂ ಅರಿತಿರಲಿಲ್ಲ. ವೃತ್ತಿ ರಂಗಭೂಮಿಯಲ್ಲಿ ಬೆಳೆದು ನಂತರ ಕನ್ನಡ ಚಲನಚಿತ್ರ ರಂಗಕ್ಕೆ ಪ್ರವೇಶಿಸಿದ ರಾಜಕುಮಾರ ತಮ್ಮ ನಟನೆ ಹಾಗೂ ಸನ್ನಡತೆಯಿಂದ ರಾಜಣ್ಣನೇ ಆಗಿಹೋದ.
ಬಡತನದಲ್ಲಿಯೇ ಬಾಲ್ಯ ಕಳೆದು ಯೌವನದಲ್ಲಿರುವಾಗ ಕರ್ನಾಟಕ ಆಂದ್ರ ಸಾರ್ವಭೌಮ ಯಜಮಾನ ಗುಬ್ಬಿ ವೀಣ್ಣನವರ ಶ್ರೀ ಚನ್ನಬಸವೇಶ್ವರ ನಾಟಕ ಕಂಪನಿಯಲ್ಲಿರುವಾಗಲೇ ಅವರಿಗೆ ಬೇಡರ ಕಣ್ಣಪ್ಪನ ಪಾತ್ರಕ್ಕೆ ಕರೆ ಬಂದುದು ಇತಿಹಾಸ. ಅದುವರೆಗೆ ಮುತ್ತುರಾಜನಾಗಿದ್ದವನು ರಾಜಕುಮಾರನಾಗಿ ಕನ್ನಡ ನಾಡಿಗೆ ರಾಜನಾಗಿ ಬೆಳೆದುಬಿಟ್ಟ. ಸಹಜ ಅಭಿನಯ, ಭಾವನೆಗಳಿಗೆ ಜೀವ ತುಂಬಿ ಕನ್ನಡಿಗರ ಮನೆ ಮಗನಾದ. ಪೌರಾಣಿಕ ಪಾತ್ರಗಳಿರಲಿ, ಐತಿಹಾಸಿಕ ಪಾತ್ರಗಳಿರಲಿ, ಬಾಂಡ್ ಮಾದರಿ ಇರಲಿ, ಜಾನಪದ ಪಾತ್ರಗಳಿರಲಿ ಹೀಗೆ ಎಲ್ಲ ಬಗೆಯ ಪಾತ್ರಗಳಲ್ಲಿ ಅಭಿನಯಿಸಿದರು. ರಾಜನಿಂದ ಹುಚ್ಚನವರೆಗೆ ಎಲ್ಲ ಪಾತ್ರಗಳಲ್ಲಿ ಅಭಿನಯಿಸಿ ಪಾತ್ರವೇ ಅವರಾದರು.
ಇಂದಿಗೂ ವಿಜಯನಗರದ ಅರಸ ಶ್ರೀ ಕೃಷ್ಣದೇವರಾಯ, ಮಯೂರ, ಇಮ್ಮಡಿ ಪುಲಕೇಶಿ, ಹಿರಣ್ಯಕಶ್ಯಪು, ರಾವಣ ಎಂದಾಗ ನೆನಪಾಗುವುದೇ ರಾಜಣ್ಣನ ಮುಖ. ಅಷ್ಟು ಸಹಜ ಅಬಿನಯ ಅವರದ್ದು. ಕನ್ನಡ ಚಿತ್ರರಂಗದ ಮೇರು ನಟನಾದರೂ ಅಹಂಕಾರ ಅವರ ಬಳಿ ಸುಳಿಯಲಿಲ್ಲ. ಅವರು ಸದಾ ಸಾಮಾನ್ಯರಂತೆ ಬಿಳಿ ಅಂಗಿ, ಬಿಳಿ ಪಂಚೆ ಧರಿಸಿಯೇ ಎಲ್ಲಡೆ ಓಡಾಡುತ್ತಿದ್ದರು. ದೇವರಗಳ ಮೇಲೆ ಭಕ್ತಿಯಿಂದ ಹಾಡುಗಳನ್ನು ಹಾಡುತ್ತಿದ್ದ ಅವರಿಗೆ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮೇಲೆ ಎಲ್ಲಿಲ್ಲದ ಭಕ್ತಿ. ನಾಡಿನ ಎಲ್ಲ ದೇವರ ಭಕ್ತಿಗೀತೆಗಳನ್ನು ಹಾಡಿ ಅದರಿಂದ ಬಂದ ಹಣದಿಂದ ಹಲವಾರು ಜನೋಪಯೋಗಿ ಕಾರ್ಯಗಳನ್ನು ಮಾಡುತ್ತಿದ್ದರು.
ವೃತ್ತಿ ರಂಗಭೂಮಿಯ ಹಿರಿಯ ಅಸಾಹಯಕ, ಅನಾರೋಗ್ಯಪೀಡಿತ ಕಲಾವಿದರಿಗೆ ಸಹಾಯಾರ್ಥ ಸಂಗೀತ ಸಂಜೆಗಳನ್ನು ನಡೆಸಿ ಅದರ ಹಣವನ್ನು ಅವರ ಕುಟುಂಬಗಳಿಗೆ ನೀಡುತ್ತಿದ್ದರು. ಇವರಂತೆ ಅಭಿನಯ ಹಾಗೂ ಗಾಯನದಲ್ಲಿ ಪ್ರಖ್ಯಾತರಾಗಿ ಪದವಿ-ಪ್ರಶಸ್ತಿ ಗಳಿಸಿದ ನಟ ಜಗತ್ತಿನ ಯಾವ ಭಾಷೆಯಲ್ಲೂ ಇಲ್ಲ. ಇವರ ಚಲನಚಿತ್ರಗಳಲ್ಲಿ ಕನ್ನಡ ಭಾಷೆ, ನಾಡು-ನುಡಿಯ ಬಗ್ಗೆ ಅಭಿಮಾನದ ಮಾತುಗಳು, ಸಂಭಾಷಣೆಗಳು, ಹಾಡುಗಳು ಹೇರಳವಾಗಿರುತ್ತಿದ್ದವು. ಕನ್ನಡ ಭಾಷೆಗಾಗಿ ನಡೆದ ಗೋಕಾಕ್ ಚಳುವಳಿಯಲ್ಲಿ ಇವರ ಪಾತ್ರ ಅತ್ಯಂತ ಪ್ರಮುಖವಾದದ್ದು.
ಕರ್ನಾಟಕದ ಮನೆ ಮಗನಾಗಿದ್ದ ಇವರು ರಾಜಕೀಯದಿಂದ ಅತ್ಯಂತ ದೂರವಾಗಿ ಉಳಿದಿದ್ದರು. ಇವರನ್ನು ರಾಜಕೀಯಕ್ಕೆ ಎಳೆತರುವ ಪ್ರಯತ್ನಗಳು ನಡೆದವಾದರೂ, ನಾನು ಕರ್ನಾಟಕದಲ್ಲಿ ಕನ್ನಡಿಗರ ಮನದಲ್ಲಿ ರಾಜನಾಗಿದ್ದೇನೆ. ನಿಮ್ಮ ಮಂತ್ರಿ ಸ್ಥಾನ ನನಗೆ ಬೇಡವೆಂದು ನಯವಾಗಿ ಹೇಳಿದವರು ಇವರು.
ಇವರ ಚಿತ್ರಗಳಲ್ಲಿ ಇವರು ಎಲ್ಲಿಯೂ ಮದ್ಯಪಾನ, ಧೂಮ್ರಪಾನ ಮಾಡುವ ದೃಶ್ಯಗಳು ಇರದಂತೆ ಜಾಗ್ರತೆ ವಹಿಸುತ್ತಿದ್ದರು. ಏಕೆಂದರೆ ನನ್ನನ್ನು ನೋಡಿ ನನ್ನ ಅಭಿಮಾನಿಗಳು ಈ ರೀತಿಯ ದುಶ್ಚಟಗಳನ್ನು ಕಲಿಯಬಾರದು ಎನ್ನುವ ಕಳಕಳಿ ಅವರದಾಗಿತ್ತು.
ತಮ್ಮ ಅಭಿಮಾನಿಗಳನ್ನು ದೇವರು ಎಂದು ಸಂಬೋಧಿಸಿ ಅಭಿಮಾನಿಗಳಲ್ಲಿ ದೇವರನ್ನು ಕಂಡವರು. ಇಂತಹ ಅಪರೂಪದ ನಟ ಭಾರತ ಮಾತ್ರವಲ್ಲ, ವಿಶ್ವದ ಚಲನಚಿತ್ರ ರಂಗದಲ್ಲಿ ಹಿಂದೆ ಹುಟ್ಟಿಲ್ಲ, ಮುಂದೆ ಹುಟ್ಟುವುದೂ ಇಲ್ಲ.
– ಶಶಿಕಾಂತ ಕೊರ್ಲಹಳ್ಳಿ.