ಮೈಸೂರು:- ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಧಾರವಾಡ ಹೈಕೋರ್ಟ್ ನಿರಾಕರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮುಡಾ ದೂರುದಾರ ಸ್ನೇಹಮಯಿ ಕೃಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ನಮ್ಮ ಹೋರಾಟಕ್ಕೆ ಒಂದು ಹಿನ್ನಡೆಯಾಗಿದೆ. ಆದ್ರೆ ಇದಕ್ಕಾಗಿ ಹೋರಾಟದಿಂದ ಹಿಂದೆ ಸರಿಯಲ್ಲ. ಸುಪ್ರೀಂ ಕೋರ್ಟ್‌ಗೆ ಹೋಗ್ತೀನಿ ಎಂದು ಹೇಳಿದ್ದಾರೆ.
ನ್ಯಾಯಾಲಯ ಯಾವ ವಿಚಾರವನ್ನಿಟ್ಟುಕೊಂಡು ಸಿಬಿಐ ತನಿಖೆಗೆ ಕೊಡಲು ನಿರಾಕರಿಸಿದೆ ಗೊತ್ತಿಲ್ಲ. ಆ ಅಂಶಗಳನ್ನು ನೋಡಿ ನಮ್ಮ ವಕೀಲರ ಜೊತೆ ಮಾತಾಡುತ್ತೇನೆ. ಬಳಿಕ ನಾವು ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ. ಲೋಕಾಯುಕ್ತ ತನಿಖೆ ಮೇಲೆ ನಮಗೆ ನಂಬಿಕೆ ಇಲ್ಲ. ಸಿದ್ದರಾಮಯ್ಯ ಅವರು ಹೇಳಿದಂತೆ ತನಿಖೆ ನಡೆಯುತ್ತಿದೆ ಎಂಬ ಅನುಮಾನ ಇತ್ತು. ಅದಕ್ಕಾಗಿ ನಾವು ಸಿಬಿಐಗೆ ಹೋಗಬೇಕೆಂದು ಹೋರಾಟ ಮಾಡ್ತೀವಿ. ಮುಂದಿನ ವಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತೇವೆ. ಈ ಪ್ರಕರಣವನ್ನ ಸಿಬಿಐಗೆ ನೀಡುವಂತೆ ಹೋರಾಟ ಮಾಡ್ತೀವಿ ಎಂದು ತಿಳಿಸಿದ್ದಾರೆ.
ಯುದ್ಧದಲ್ಲಿ ಸೋಲು ಗೆಲುವು ಸಹಜ. ಇದುವರೆಗೆ ನಾವು ಗೆದ್ದಿದ್ದೆವು, ಈಗ ಸಣ್ಣ ಹಿನ್ನಡೆಯಾಗಿದೆ ಅಷ್ಟೇ. ಇದರಿಂದ ನಾನು ವ್ಯತಿರಿಕ್ತವಾಗುವುದಿಲ್ಲ. ಈಗಲೂ ನನಗೆ ಲೋಕಾಯುಕ್ತದ ತನಿಖೆ ಮೇಲೆ ನಂಬಿಕೆ ಇಲ್ಲ. ಸುಪ್ರೀಂ ಕೋರ್ಟ್ ಮುಡಾ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸುತ್ತದೆ ಎಂಬ ನಂಬಿಕೆಯಿದೆ ಎಂದು ಹೇಳಿದ್ದಾರೆ.