ನವದೆಹಲಿ:- ನನ್ನ ಬಿಟ್ಟು ದೆಹಲಿಯಲ್ಲಿ ನನ್ನ ಗಂಡ 2ನೇ ಮದುವೆ ಆಗ್ತಿದ್ದಾರೆ, ದಯವಿಟ್ಟು ನ್ಯಾಯ ಕೊಡಿಸಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಪಾಕ್ ಮಹಿಳೆ ಮನವಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರಿಂದ ನ್ಯಾಯ ಕೋರಿ ನಿಕಿತಾ ನಾಗ್ದೇವ್ ಹೆಸರಿನ ಮಹಿಳೆ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ. ಕರಾಚಿ ನಿವಾಸಿ ನಿಕಿತಾ, ದೀರ್ಘಾವಧಿಯ ವೀಸಾದ ಮೇಲೆ ಇಂದೋರ್‌ನಲ್ಲಿ ವಾಸಿಸುತ್ತಿದ್ದ ಪಾಕಿಸ್ತಾನಿ ಮೂಲದ ವ್ಯಕ್ತಿ ವಿಕ್ರಮ್ ನಾಗ್ದೇವ್ ಅವರನ್ನು 2020ರ ಜನವರಿ 26 ರಂದು ಕರಾಚಿಯಲ್ಲಿ ಹಿಂದೂ ಪದ್ಧತಿಗಳ ಪ್ರಕಾರ ವಿವಾಹವಾಗಿದ್ದರು. ಒಂದು ತಿಂಗಳ ನಂತರ, ವಿಕ್ರಮ್ ಭಾರತಕ್ಕೆ ಬಂದರು. ಅಲ್ಲಿಂದಾಚೆಗೆ ನನ್ನ ಜೀವನವೇ ಹಾಳಾಗಿದೆ ಎಂದು ನಿಕಿತಾ ಆರೋಪಿದ್ದಾರೆ.
ಭಾರತಕ್ಕೆ ಬರಲು ಸಾಕಷ್ಟು ಬಾರಿ ಪ್ರಯತ್ನಿಸಿದೆ. 2020 ರಲ್ಲಿ ವೀಸಾ ವಿಚಾರಕ್ಕಾಗಿ ನನ್ನನ್ನು ಅಟ್ಟಾರಿ ಗಡಿಯಲ್ಲೇ ತಡೆದು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಲಾಯಿತು. ಅಂದಿನಿಂದ, ನನ್ನನ್ನು ಭಾರತಕ್ಕೆ ಕರೆಸಿಕೊಳ್ಳುವಂತೆ ವಿಕ್ರಮ್‌ಗೆ ಮನವಿ ಮಾಡುತ್ತಿದ್ದೇನೆ. ಆದರೆ, ಪ್ರತಿ ಬಾರಿಯೂ ಆತ ನಿರಾಕರಿಸುತ್ತಲೇ ಇದ್ದಾನೆ ಎಂದು ವೀಡಿಯೋದಲ್ಲಿ ಭಾವನಾತ್ಮಕವಾಗಿ ಮಹಿಳೆ ಮಾತನಾಡಿದ್ದಾರೆ.
ಈಗ ನನಗೆ ನ್ಯಾಯ ಸಿಗದಿದ್ದರೆ, ಮಹಿಳೆಯರು ನ್ಯಾಯದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಎಷ್ಟೋ ಹೆಣ್ಣುಮಕ್ಕಳು ವಿವಾಹವಾದ ಬಳಿಕ ಮನೆಗಳಲ್ಲಿ ದೈಹಿಕ ಮತ್ತು ಮಾನಸಿಕ ಕಿರುಕುಳ ಅನುಭವಿಸುತ್ತಿದ್ದಾರೆ. ಎಲ್ಲರೂ ನನ್ನೊಂದಿಗೆ ನಿಲ್ಲಬೇಕೆಂದು ನಾನು ವಿನಂತಿಸುತ್ತೇನೆ ಎಂದು ಮನವಿ ಮಾಡಿಕೊಂಡಿದ್ದಾರೆ.


