ನವದೆಹಲಿ: ಬಡತನದಿಂದ ನನ್ನ ತಾಯಿ ಒಂದು ಸೀರೆಯನ್ನೂ ಖರೀದಿಸಲಿಲ್ಲ ಎಂದು ಪ್ರಧಾನಿ ಮೋದಿ ಭಾವುಕರಾಗಿದ್ದಾರೆ. ಬಿಹಾರ ರಾಜ್ಯ ಜೀವಿಕಾ ನಿಧಿ ಸಖ್ ಸಹಕಾರಿ ಸಂಘ ಲಿಮಿಟೆಡ್ ಅನ್ನು ವರ್ಚುವಲ್ ಆಗಿ ಉದ್ಘಾಟಿಸಿ, ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಆರ್‌ಜೆಡಿ-ಕಾಂಗ್ರೆಸ್ ತಮ್ಮ ತಾಯಿಯನ್ನು ನಿಂದಿಸಬಹುದು ಎಂದು ಯಾರೂ ಊಹಿಸಿರಲಿಲ್ಲ ಎಂದು ಹೇಳಿದರು.
ನನ್ನ ತಾಯಿ ನಮ್ಮೆಲ್ಲರನ್ನೂ ತೀವ್ರ ಬಡತನದಲ್ಲಿ ಬೆಳೆಸಿದರು. ಅವರು ಎಂದಿಗೂ ತನಗಾಗಿ ಹೊಸ ಸೀರೆಯನ್ನು ಖರೀದಿಸಲಿಲ್ಲ ಮತ್ತು ನಮ್ಮ ಕುಟುಂಬಕ್ಕಾಗಿ ಪ್ರತಿ ಪೈಸೆಯನ್ನೂ ಉಳಿಸುತ್ತಿದ್ದರು. ನನ್ನ ತಾಯಿಯಂತೆ, ನನ್ನ ದೇಶದ ಕೋಟ್ಯಂತರ ತಾಯಂದಿರು ಪ್ರತಿದಿನ ‘ತಪಸ್ಸು’ ಮಾಡುತ್ತಾರೆ ಎಂದು ಭಾವುಕರಾದರು.
ಕೆಲವು ಸಮಯದ ಹಿಂದೆ, 100 ವರ್ಷಗಳನ್ನು ಪೂರೈಸಿದ ನಂತರ, ನನ್ನ ತಾಯಿ ನಮ್ಮೆಲ್ಲರನ್ನೂ ತೊರೆದರು. ರಾಜಕೀಯದೊಂದಿಗೆ ಯಾವುದೇ ಸಂಬಂಧವಿಲ್ಲದ ಅವರನ್ನು ಈಗ ಆರ್‌ಜೆಡಿ, ಕಾಂಗ್ರೆಸ್‌ನಿಂದ ನಿಂದಿಸಲಾಯಿತು. ಸಹೋದರಿಯರೇ ಮತ್ತು ತಾಯಂದಿರೇ, ನಾನು ನಿಮ್ಮ ಮುಖಗಳನ್ನು ನೋಡಬಲ್ಲೆ. ನೀವು ಅನುಭವಿಸಿದ ನೋವನ್ನು ನಾನು ಊಹಿಸಬಲ್ಲೆ. ಕೆಲವು ತಾಯಂದಿರ ಕಣ್ಣಲ್ಲಿ ಕಣ್ಣೀರು ನನಗೆ ಕಾಣುತ್ತಿದೆ. ಇದು ತುಂಬಾ ದುಃಖಕರ, ನೋವಿನ ಸಂಗತಿ ಎಂದು ಅವರು ಹೇಳಿದರು.



